ಹಿರಿಯ ನಾಗರಿಕರ ರೈಲ್ವೆ ಟಿಕೆಟ್ ರಿಯಾಯಿತಿ ರದ್ದಿಗೆ ಖಂಡನೆ

ಬೀದರ್: ಜು.24:ಕೇಂದ್ರ ಸರ್ಕಾರವು ರೈಲ್ವೆ ಟಿಕೆಟ್ ದರದಲ್ಲಿ ಹಿರಿಯ ನಾಗರಿಕರ ರಿಯಾಯಿತಿ ರದ್ದುಪಡಿಸಿರುವುದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೀತಾ ಪಂಡಿತರಾವ್ ಚಿದ್ರಿ ತೀವ್ರವಾಗಿ ಖಂಡಿಸಿದ್ದಾರೆ.

ಸಂಸದರಿಗೆ ರೈಲ್ವೆ ಟಿಕೆಟ್ ರಿಯಾಯಿತಿ ಮುಂದುವರಿದಿರುವಾಗ, ರೈಲ್ವೆ ಟಿಕೆಟ್ ದರದಲ್ಲಿ 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಶೇ 50 ಹಾಗೂ 60 ವರ್ಷ ಮೇಲ್ಪಟ್ಟ ಪುರುಷರಿಗೆ ಇದ್ದ ಶೇ 40 ರಷ್ಟು ರಿಯಾಯಿತಿಯನ್ನು ಕೈಬಿಡುವ ಮೂಲಕ ಸರ್ಕಾರ ಹಿರಿಯ ನಾಗರಿಕರಿಗೆ ಅಗೌರವ ತೋರಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಸಂಪನ್ಮೂಲ ಕ್ರೋಡೀಕರಣವೇನೂ ಆಗುವುದಿಲ್ಲ ಎಂದು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಬಂಡವಾಳಶಾಹಿಗಳ ಕೋಟ್ಯಂತರ ರೂಪಾಯಿ ಸಾಲ ವಸೂಲಿ ಕೈಬಿಡುತ್ತಿವೆ. ಅದರೆ, ಹಿರಿಯ ನಾಗರಿಕರ ರೈಲ್ವೆ ಟಿಕೆಟ್ ದರ ರಿಯಾಯಿತಿ ‘ಹೊರೆ’ ಎಂದು ಭಾವಿಸಿ, ಅದನ್ನು ಹಿಂಪಡೆಯುವ ಮೂಲಕ ಸರ್ಕಾರ ಕೇವಲ ರೂ. 1,500 ಕೋಟಿ ಉಳಿಸಲು ಬಯಸಿದೆ ಎಂದು ಟೀಕಿಸಿದ್ದಾರೆ.

ರಿಯಾಯಿತಿ ಕಡಿತದಿಂದ ಹೆಚ್ಚಿನ ಆದಾಯ ಇಲ್ಲದ, ವಿಶ್ರಾಂತಿ ಜೀವನ ಕಳೆಯುತ್ತಿರುವ ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣ ಹೊರೆಯಾಗಲಿದೆ ಎಂದು ಹೇಳಿದ್ದಾರೆ.

ಹಿರಿಯ ನಾಗರಿಕರು ಅನುಭವದ ಗಣಿಯಾಗಿರುತ್ತಾರೆ. ಕೇಂದ್ರ ಸರ್ಕಾರ ಅವರ ಅನುಭವವನ್ನು ದೇಶದ ಪ್ರಗತಿಗೆ ಬಳಸಿಕೊಳ್ಳಬೇಕು. ಬಜೆಟ್‍ನಲ್ಲಿ ಅವರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ಅದನ್ನು ಬಿಟ್ಟು ಇರುವ ಸೌಲಭ್ಯವನ್ನೇ ರದ್ದುಪಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.

ಹಿರಿಯ ನಾಗರಿಕರ ರೈಲ್ವೆ ಟಿಕೆಟ್ ದರ ರಿಯಾಯಿತಿಯನ್ನು ಹಿಂದಿನಂತೆಯೇ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.