ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯಿತಿಗೆ ಒತ್ತಾಯ

ರಾಯಚೂರು.ಜು.೨೨- ಹಿರಿಯ ನಾಗರೀಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ಇದನ್ನು ಯಥಾರೀತಿಯಲ್ಲಿ ಮುಂದುವರೆಸುವಂತೆ ಕಾಂಗ್ರೆಸ್ ಮುಖಂಡರಾದ ಮುಜಿಬುದ್ದೀನ್ ಒತ್ತಾಯಿಸಿದ್ದಾರೆ.
ಹಿರಿಯ ನಾಗರೀಕರಿಗೆ ದೇಶದಲ್ಲಿ ಎಲ್ಲಾ ರೀತಿಯ ಗೌರವ, ಸನ್ಮಾನಗಳು ದೊರೆಯುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಿರಿಯ ನಾಗರಿಕರಿಗೆ ಬಸ್ ಪ್ರಯಾಣ ಅತ್ಯಂತ ಕಷ್ಟಕರವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಪ್ರಯಾಣ ಸುಗಮ ಮತ್ತು ಸುರಕ್ಷಿತವಾಗಿದ್ದರಿಂದ ಅನೇಕರು ರೈಲು ಮೂಲಕ ಸಂಚರಿಸುತ್ತಾರೆ. ಇವರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಈಗ ಇದನ್ನು ಕೇಂದ್ರ ಸರ್ಕಾರ ತಡೆದಿದ್ದು, ಇದನ್ನು ಯಥಾರೀತಿಯಲ್ಲಿ ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.
ಕೋವಿಡ್ ಕಾರಣಕ್ಕೆ ಎರಡು ವರ್ಷ ಕೊಟ್ಟಿಲ್ಲ. ವೃದ್ದರು ಪ್ರಯಾಣ ಹೊರಡುವುದು ಇತ್ತಿಚಿಗೆ ಶುರು ಮಾಡಿದ್ದಾರೆ. ಅವರ ಪ್ರಯಾಣಕ್ಕೆ ದುಬಾರಿ ವೆಚ್ಚ ಅಡ್ಡಿಯಾಗಬಾರದು ಎಂದು ಕೋರಿದ್ದಾರೆ. ಕೇಂದ್ರ ಸರ್ಕಾರ ಒಂದೆಡೆ ಸಬಕಾ ಸಾಥ ಸಬಕಾ ವಿಕಾಸ ಎಂದು ಹೇಳಿ ಇನ್ನೊಂದು ಮಗ್ಗಲಿನಿಂದ ವೃದ್ದರಿಗೆ ರಿಯಾಯಿತಿ ವಿಷಯದಲ್ಲಿ ವಂಚನೆ, ರಾಜಕೀಯ ಮಾಡಬಾರದು. ರೈಲ್ವೆ ಮಂತ್ರಿಗಳು ರಿಯಾಯಿತಿ ಮುಂದುವರೆಸಿ, ಕೇಂದ್ರ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.