ಹಿರಿಯ ನಟ, ಸತೀಶ್ ಕೌಶಿಕ್ ನಿಧನ

ಮುಂಬೈ, ಮಾ ೯- ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ನಿನ್ನೆ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ ೬೬ ವರ್ಷ ವಯಸ್ಸಾಗಿತ್ತು.
ನಟ ಅನುಪಮ್ ಖೇರ್ ಟ್ವಿಟರ್‌ನಲ್ಲಿ ಸತೀಶ್ ಇನ್ನಿಲ್ಲ ಎನ್ನುವ ವಿಚಾರವನ್ನು ಪೋಸ್ಟ್‌ಮಾಡಿದ್ದಾರೆ. ಕಂಗನಾ ರಣಾವತ್ ಎಮರ್ಜೆನ್ಸಿ ಸಿನಿಮಾದಲ್ಲಿ ಸತೀಶ್ ಮತ್ತು ಅನುಪಮ್ ಖೇರ್‌ಒಟ್ಟಿಗೆ ಅಭಿನಯಿಸಿದ್ದಾರೆ.
ಸತೀಶ್‌ಗೆ ಎದೆ ನೋವು ಕಾಣಿಸಿಕೊಂಡಿತ್ತು ತಕ್ಷಣವೇ ಕುಟುಂಬಸ್ಥರು ನವದೆಹಲಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ನಡು ರಸ್ತೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ನೇಹಿತರು ಮತ್ತು ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ ಸತೀಶ್ ದೇಹವನ್ನು ಮುಂಬೈ ನಿವಾಸಕ್ಕೆ ತರಲಿದ್ದಾರೆ. ಅಂತ್ಯ ಸಂಸ್ಕಾರವನ್ನು ಯಾರಿ ರಸ್ತೆ, ಮುಂಬೈನ ವರ್ಸೋವಾ ನಿವಾಸದಲ್ಲಿ ನಡೆಯಲಿದೆ.
ಸತೀಶ್ ಅವರು ಹಲವು ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ೧೯೮೩ರಲ್ಲಿ ಮೊದಲ ಬಾರಿಗೆ ಅವರು ಬಣ್ಣ ಹಚ್ಚಿದರು. ‘ಜಲ್ವಾ’, ‘ಸ್ವರ್ಗ್’, ‘ಆಂಟಿ ನಂಬರ್ ೧’, ‘ಕಲ್ಕತ್ತಾ ಮೇಲ್’, ‘ಭಾಗಿ ೩’ ಸೇರಿ ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಂಗನಾ ರಣಾವತ್ ನಿರ್ದೇಶಿಸಿ, ನಟಿಸುತ್ತಿರುವ ‘ಎಮರ್ಜೆನ್ಸಿ’ ಚಿತ್ರದಲ್ಲಿ ಜಗ್ಜೀವನ್ ರಾಮ್ ಪಾತ್ರವನ್ನು ಅವರು ಮಾಡುತ್ತಿದ್ದರು. ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ಸತೀಶ್ ನಿಧನ ಹೊಂದಿದ್ದು ನಿಜಕ್ಕೂ ದುಃಖದ ಸಂಗತಿ. ನಟಿ ಕಂಗನಾ ಟ್ವೀಟ್ ಮಾಡಿದ್ದಾರೆ.
ಸತೀಶ್ ಚಂದ್ರ ಕೌಶಿಕ್ ಅವರು ೧೯೫೬ ಏಪ್ರಿಲ್ ೧೩ ರಂದು ಹರಿಯಾಣದಲ್ಲಿ ಜನಿಸಿದರು. ೧೯೮೦ರ ದಶಕದಲ್ಲಿ ತಮ್ಮ ಸಿನಿಮಾ ವೃತ್ತಿಜೀವನ ಪ್ರಾರಂಭಿಸಿದರು. ನಟನಾಗಿ ೧೯೮೭ ರ ಹಿಂದಿ ಸಿನಿಮಾ ‘ಮಿಸ್ಟರ್ ಇಂಡಿಯಾ’ ದಲ್ಲಿ ‘ಕ್ಯಾಲೆಂಡರ್’ ಮತ್ತು ೧೯೯೭ ರ ‘ದಿವಾನ ಮಸ್ತಾನ’ ಚಿತ್ರದ ‘ಪಪ್ಪು ಪೇಜರ್’ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
ಮಾರ್ಚ್ ೭ ರಂದು ಮುಂಬೈನಲ್ಲಿ ಗೀತರಚನೆಕಾರ ಮತ್ತು ಲೇಖಕ ಜಾವೇದ್ ಅಖ್ತರ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಸತೀಶ್ ಭಾಗವಹಿಸಿದ್ದರು. ಈವೆಂಟ್ನ ನಾಲ್ಕು ಫೋಟೋಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದರು. ಇದೇ ವಿಡಿಯೋವನ್ನು ನಟನ ಅಭಿಮಾನಿಗಳು ಪೋಸ್ಟ್ ಹಾಕಿಕೊಂಡು ಸಂತಾಪ ಸೂಚಿಸಿದ್ದಾರೆ.