ಹಿರಿಯ ನಟ ಶಿವರಾಂ ನಿಧನ

ಬೆಂಗಳೂರು, ಡಿ.4- ಅಪಘಾತದಲ್ಲಿ ಗಾಯಗೊಂಡಿದ್ದ ಹಿರಿಯ ನಟ ಶಿವರಾಂ ಅವರು ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದರು. ನಂತರ ಅವರ ಆರೋಗ್ಯ ಮತ್ತೆ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಶಿವರಾಂ ಅವರು ಗುರುತಿಸಿಕೊಂಡಿದ್ದರು.
1938ರಲ್ಲಿ ಚೂಡಸಂದ್ರ ಹಳ್ಳಿಯಲ್ಲಿ ಎಸ್.ಶಿವರಾಂ ಜನಿಸಿದರು. 6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಹೆಚ್ಚುಗಾರಿಕೆ ಅವರದ್ದು. ಅವರು ಶಿವರಾಮಣ್ಣ ಅಂತಲೇ ಖ್ಯಾತರಾಗಿದ್ದರು. ಪೋಷಕ ನಟನಾಗಿ, ಹಾಸ್ಯನಟನಾಗಿ ಶಿವರಾಂ ನಟಿಸಿದ್ದರು. ನಿರ್ದೇಶಕ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ‘ರಾಶಿ ಬ್ರದರ್ಸ್‌’ ಸಂಸ್ಥೆಯಡಿ ಹಲವು ಚಿತ್ರ ನಿರ್ಮಿಸಿದ್ದರು. ಪುಟ್ಟಣ್ಣ ಕಣಗಾಲ್ ಜತೆಯೂ ಶಿವರಾಂ ಕೆಲಸ ಮಾಡಿದ್ದರು. ಹಲವು ದಿಗ್ಗಜ ನಟರೊಂದಿಗೆ ಶಿವರಾಂ ಅಭಿನಯಿಸಿದ್ದರು.
ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ಚೂಡಸಂದ್ರ ಗ್ರಾಮದಲ್ಲಿ ಶಿವರಾಂ ಜನಿಸಿದರು. ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅವರು ಬೆಂಗಳೂರಿಗೆ ಬಂದರು. ಶಿವರಾಂ ಸೋದರ ಟೈಪ್‌ ರೈಟಿಂಗ್ ಇನ್ಸಿಟಿಟ್ಯೂಟ್ ನಡೆಸುತ್ತಿದ್ದರು. ಗುಬ್ಬಿ ವೀರಣ್ಣ ಅವರ ನಾಟಕಗಳಿಂದ ಶಿವರಾಂ ಅವರು ತುಂಬಾನೇ ಪ್ರೇರಣೆಗೆ ಒಳಗಾಗಿದ್ದರು. ಅವರು ನಾಟಕಗಳಲ್ಲಿ ಬಣ್ಣ ಹಚ್ಚೋಕೆ ಆರಂಭಿಸಿದರು.
ನಂತರ ಅವರಿಗೆ ಚಿತ್ರರಂಗದಿಂದ ಆಫರ್ ಬಂತು. 1965ರಲ್ಲಿ ಕನ್ನಡ ಚಿತ್ರರಂಗಕ್ಕೆ ಶಿವರಾಂ ಪದಾರ್ಪಣೆ ಮಾಡಿದರು. ‘ಬೆರೆತ ಜೀವ’ ಅವರ ಮೊದಲ ಚಿತ್ರ. ಕು.ರಾ ಸೀತಾರಾಮಶಾಸ್ತ್ರಿಯಂತಹ ಖ್ಯಾತ ನಿರ್ದೇಶಕರ ಜತೆ ಅವರು ಕೆಲಸ ಮಾಡಿದ್ದರು.
ನಿರ್ಮಾಣದಲ್ಲೂ ಆಸಕ್ತಿ
ಚಿತ್ರ ನಿರ್ಮಾಣದಲ್ಲೂ ಶಿವರಾಂ ಆಸಕ್ತಿ ಬೆಳೆಸಿಕೊಂಡರು. 1970ರಲ್ಲಿ ತೆರೆಗೆ ಬಂದ ‘ಗೆಜ್ಜೆ ಪೂಜೆ’, ‘ಉಪಾಸನೆ (1970)’, ‘ನಾನೊಬ್ಬ ಕಳ್ಳ (1979)’ ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಈ ಮೂಲಕ ಸಿನಿಮಾ ನಿರ್ಮಾಣಕ್ಕೂ ಕೊಡುಗೆ ನೀಡಿದರು.
ನಟಿಸಿದ ಚಿತ್ರಗಳು:
ಬೆರೆತ ಜೀವ (1965), ಮಾವನ ಮಗಳು (1965), ದುಡ್ಡೇ ದೊಡ್ಡಪ್ಪ (1966), ಲಗ್ನಪತ್ರಿಕೆ (1967), ಶರಪಂಜರ (1971), ಮುಕ್ತಿ(1971), ಭಲೇ ಅದೃಷ್ಟವೋ ಅದೃಷ್ಟ(1971), ಸಿಪಾಯಿ ರಾಮು (1972), ನಾಗರಹಾವು(1972), ನಾ ಮೆಚ್ಚಿದ ಹುಡುಗ (1972), ಹೃದಯಸಂಗಮ (1972), ಕಿಲಾಡಿ ಕಿಟ್ಟು (1978), ನಾನೊಬ್ಬ ಕಳ್ಳ (1979), ಹಾಲುಜೇನು (1982), ಪಲ್ಲವಿ ಅನುಪಲ್ಲವಿ (1983), ಭಜರಂಗಿ (2013), ಬಂಗಾರ s / O ಬಂಗಾರದ ಮನುಷ್ಯ (2017) ಮೊದಲಾದ ಸಿನಿಮಾಗಳಲ್ಲಿ ಶಿವರಾಂ ನಟಿಸಿದ್ದರು. ಮಕ್ಕಳ ಸೈನ್ಯ ಸೇರಿ ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. 1980ರಲ್ಲಿ ‘ಡ್ರೈವರ್ ಹನುಮಂತು’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.
ಧಾರಾವಾಹಿಯಲ್ಲೂ ನಟನೆ:
ಹಿರಿತೆರೆ ಮಾತ್ರವಲ್ಲದೆ ಶಿವರಾಂ ಅವರು ಕಿರುತೆರೆಯಲ್ಲೂ ನಟಿಸಿದ್ದಾರೆ. ‘ಗೃಹಭಂಗ’ ಮತ್ತು ‘ಬದುಕು’ ಧಾರವಾಹಿಯಲ್ಲೂ ಅದ್ಭುತವಾಗಿ ಅವರು ನಟಿಸಿದ್ದರು