ಹಿರಿಯ ನಟ ಶಿವರಾಂಗೆ ಚಿತ್ರರಂಗದ ಕಂಬನಿ

ಬೆಂಗಳೂರು,ಡಿ.೫- ಶರಪಂಜರದ ಶಿವರಾಮಣ್ಣ ಎಂದೇ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದ ಹಿರಿಯ ನಟ ನಿರ್ಮಾಪಕ, ನಿರ್ದೇಶಕ, ಶಿವರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕನ್ನಡ ಚಿತ್ರರಂಗದ ಮಂದಿ ಕಂಬನಿ ಮಿಡಿದಿದೆ.

ಮನೆಯಲ್ಲಿ ಕಾಲುಜಾರಿ ಬಿದ್ದು ಕಳೆದ ನಾಲ್ಕೈದು ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿ ನಿನ್ನೆ ಇಹಲೋಕ ತ್ಯಜಿಸಿದ ಶಿವರಾಮಣ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಗರ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಿಕೊಡಲಾಗಿತ್ತು.

ಚಿತ್ರರಂಗದ ಹಿರಿಯ-ಕಿರಿಯ ಮಂದಿ ಸೇರಿದಂತೆ ಅನೇಕ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನೆನೆದು ಭಾವುಕರಾದರು.

ಈ ವೇಳೆ ಚಿತ್ರರಂಗದ ಮಂದಿ ಶಿವರಾಮಣ್ಣ ಅವರನ್ನು ನೆನಪು ಮಾಡಿಕೊಂಡಿದ್ದು ಹೀಗೆ..

ಹಲವು ವಿಷಯಗಳ ಕುರಿತು ಚರ್ಚೆ

ಶಿವರಾಮಣ್ಣ ಅವರ ಅಗಲಿಕೆ ನೋವು ತಂದಿದೆ. ಹಲವು ವಿಷಯಗಳ ಕುರಿತು ಮುಕ್ತವಾಗಿ ಚರ್ಚೆ ಮಾಡುತ್ತಿದ್ದರು. ಆಧ್ಯಾತ್ಮಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.
ಶಿವರಾಮಣ್ಣ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶೀರ್ವಾದ ಸದಾ ನಮ್ಮ ಜೊತೆ ಇರುತ್ತದೆ. ಅವರು ಬದುಕಿದ್ದ ಸಮಯದಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಿದ್ದರು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

ಶಬ್ಧ ಭಂಡಾರ

ಚಿತ್ರರಂಗದ ಹಿರಿಯರು, ಮಾರ್ಗದರ್ಶಕರು, ಶಬ್ಧಕೋಶದ ಬಂಡಾರವಾಗಿದ್ದ ಶಿವರಾಮಣ್ಣ ಅವರ ಅಗಲಿಕೆ ನೋವು ತರಿಸಿದೆ. ಕಳೆದ ಎರಡು ವರ್ಷಗಳಿಂದ ಹಿರಿಯರು-ಕಿರಿಯ ಕಲಾವಿದರು ನಿಧನರಾಗುತ್ತಿರುವುದು ನೋವಿನ ವಿಷಯ ಎಂದು ನಟಿ ತಾರಾ ಹೇಳಿದ್ದಾರೆ.

ವಿಶೇಷ ನಂಟು

ರಂಗಭೂಮಿಯಲ್ಲಿ ಶಿವರಾಮ್ ಅವರು ವಿಶೇಷ ನಂಟು ಹೊಂದಿದ್ದರು. ಶರಪಂಜರ ಮೂಲಕ ಅವರು ಶರಪಂಜರ ಶಿವರಾಮ್ ಎಂದು ಪರಿಚಿತರಾಗಿದ್ದರು. ಹೊಸಬರು – ಹಳಬರು ಎನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಜೊತೆಗೆ ಎಲ್ಲರಿಗೂ ಪ್ರೋತ್ಸಾಹ ನೀಡುತ್ತಿದ್ದರು. ತುಂಬು ಜೀವನ ನಡೆಸಿ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ಹಲವು ವರ್ಷ ಇದ್ದರೆ ಚಿತ್ರರಂಗದ ಮಂದಿಗೆ ಅವರ ಮಾರ್ಗದರ್ಶನ ಸಿಗುತ್ತಿತ್ತು. ಅವರ ಅಗಲಿಕೆ ದೌರ್ಭಾಗ್ಯದ ಸಂಗತಿ ಎಂದು ಹಿರಿಯ ನಿರ್ದೇಶಕ ಟಿ.ಎನ್ ಸೀತಾರಾಮ್ ಹೇಳಿದ್ದಾರೆ

ದೊಡ್ಡ ಆಘಾತ

ಹಿರಿಯ ನಟ ಶಿವರಾಮಣ್ಣ ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ಆಘಾತ ಮತ್ತು ಆಶ್ಚರ್ಯ ತರಿಸಿದೆ. ಇದುವರೆಗೂ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಚಿತ್ರರಂಗದ ಎಲ್ಲಾ ಕಾರ್ಯಕ್ರಮಗಳಲ್ಲಿ ಅವರು ಬೇಕಾಗಿದ್ದರು, ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದರು. ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವುದು ದುಃಖದ ಸಂಗತಿ. ಶಿವರಾಮಣ್ಣ ಅವರ ಜೊತೆ ಹತ್ತರಿಂದ ಹನ್ನೆರಡು ಬಾರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದೇನೆ. ಅವರ ಅಗಲಿಕೆ ಚಿತ್ರರಂಗಕ್ಕೆ ಅತಿ ದೊಡ್ಡ ನಷ್ಟ. ಚಿತ್ರರಂಗದಲ್ಲಿ ಅವರೊಬ್ಬ ಅಜಾತಶತ್ರು. ಚಿತ್ರರಂಗದಲ್ಲಿ ಆರು ದಶಕಗಳ ಕಾಲ ಎಲ್ಲರನ್ನು ಸಮಾನವಾಗಿ ನೋಡುತ್ತಿದ್ದ ಅಪರೂಪದ ನಟ, ನಿರ್ದೇಶಕ, ನಿರ್ಮಾಪಕ ಎಂದು ಹಿರಿಯ ನಟ ಜೈಜಗದೀಶ್ ಹೇಳಿದ್ದಾರೆ

ಒಡನಾಟ

ಹಲವು ವರ್ಷಗಳ ಕಾಲ ಶಿವರಾಮಣ್ಣ ಅವರೊಂದಿಗೆ ಒಡನಾಟ ಹೊಂದಿದ್ದೆವು ಎಂದು ಹಿರಿಯ ನಟಿ ಲಕ್ಷ್ಮಿದೇವಿ ಹೇಳಿದ್ದಾರೆ.
ಆರಂಭದ ದಿನಗಳಲ್ಲಿ ಅವರ ಸಹಕಾರ – ಪ್ರೋತ್ಸಾಹ ನೀಡಿದ್ದರು. ಜೊತೆಗೆ ಅನೇಕ ಕಲಾವಿದರು, ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅವರ ಅಗಲಿಕೆ ನೋವು ತರಿಸಿದೆ ಎಂದು ಕಂಬನಿ ಮಿಡಿದರು.

ಹಿರಿಯಣ್ಣ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯಣ್ಣ ನಟ ಶಿವರಾಂ ಇಲ್ಲ ಎನ್ನುವುದು ಬೇಸರದ ಸಂಗತಿ ಎಂದು ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಹೇಳಿದ್ದಾರೆ.
ಮೌಲ್ಯಧಾರಿತ ಜೀವನಕ್ಕೆ ಹೆಚ್ಚು ಒತ್ತು ನೀಡಿದ ಶಿವರಾಮಣ್ಣ ಅವರು ಎಲ್ಲರನ್ನೂ ಸಮಾನಭಾವದಿಂದ ಕಾಣುತ್ತಿದ್ದರು. ಯಾವುದೇ ಸಭೆ – ಸಮಾರಂಭವಿರಲಿ ಅಲ್ಲಿ ಅವರ ಹಾಜರಿ ಇರುತ್ತಿತ್ತು. ಚಿತ್ರರಂಗದವರ ಪಾಲಿಗೆ ನಿಜಕ್ಕೂ ದೊಡ್ಡ ಅಣ್ಣನಂತೆ ಇದ್ದರು. ಅಯ್ಯಪ್ಪಸ್ವಾಮಿ ಆರಾಧಕರಾಗಿದ್ದರು. ಮಾಲೆ ಧರಿಸಿದಾಗ ಅವರನ್ನು ಅಯ್ಯಪ್ಪ ಸ್ವಾಮಿಯ ಅವತಾರದಲ್ಲಿ ಚಿತ್ರರಂಗದ ಮಂದಿ ಕಾಣುತ್ತಿದ್ದೆವು ಎಂದು ಹೇಳಿದರು

ಚಿತ್ರರಂಗದ ಸ್ನೇಹಜೀವಿ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹಿರಿಯರು, ಕಿರಿಯರನ್ನು ಕಳೆದುಕೊಳ್ಳುತ್ತಿದ್ದೇವೆ, ಇದು ನೋವಿನ ಸಂಗತಿ ಎಂದು ಸಾಹಿತಿ ಹಾಗೂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ವಿಶಿಷ್ಟವಾದ ಅಭಿನಯ ಕಲೆಯನ್ನು ಶಿವರಾಮಣ್ಣ ಕರಗತ ಮಾಡಿಕೊಂಡಿದ್ದರು. ಅವರಲ್ಲಿ ಪುಸ್ತಕ ಪ್ರೀತಿ ಇತ್ತು. ಈ ಕಾರಣಕ್ಕಾಗಿಯೇ ಅವರಲ್ಲಿ ಅಧ್ಯಯನ ಹೆಚ್ಚಿತ್ತು. ಚಿತ್ರರಂಗದ ಸ್ನೇಹಜೀವಿಯಾಗಿದ್ದರು. ಮಗನ ಮದುವೆಯನ್ನು ಸಂಪ್ರದಾಯ ರಹಿತವಾಗಿ ಮಾಡಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು ಎಂದು ಹೇಳಿದ್ದಾರೆ.

ಹೃದಯ ಶ್ರೀಮಂತಿಕೆ ಹೊಂದಿದ್ದ ವ್ಯಕ್ತಿ

ಶಿವರಾಮಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಹೃದಯ ಶ್ರೀಮಂತಿಕೆ ಹೊಂದಿದ್ದರು. ಚಿತ್ರರಂಗದಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದರು. ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಸೂಚಿಸುತ್ತಿದ್ದರು ಎಂದು ಹಿರಿಯ ಕಲಾವಿದ ನಟ ಶಿವಕುಮಾರ್ ಹೇಳಿದ್ದಾರೆ.
ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಶಿವರಾಮಣ್ಣ ಅವರಿಗೆ ನನ್ನನ್ನು ಪರಿಚಯಿಸಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಹಕಾರಿಯಾಗಿದ್ದರು. ಇಬ್ಬರನ್ನು ಮಾಡುವುದಾಗಿ ಅವರು ತಿಳಿಸಿದ್ದಾರೆ.

ಸಿನಿಮಾವೇ ಒಂದು ಕುಟುಂಬ

ಸಿನಿಮಾರಂಗ ಒಂದು ಕುಟುಂಬವಿದ್ದಂತೆ, ಅದರಲ್ಲಿ ಹಿರಿಯರು, ಕಿರಿಯರನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಹಿರಿಯ ನಟಿ ಶ್ರೀರಕ್ಷಾ ಹೇಳಿದ್ದಾರೆ.
ಒಳ್ಳೆಯವರು, ಹೃದಯವಂತರನ್ನು ಚಿತ್ರರಂಗ ಕಳೆದುಕೊಳ್ಳುತ್ತಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.
ಕಲಾವಿದರಿಗೆ ತಂದೆಯ ಸ್ಥಾನದಲ್ಲಿ ಇದ್ದು ಸಲಹೆ – ಸಹಕಾರ ನೀಡುತ್ತಿದ್ದರು. ಅವರ ನಿಧನದ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಅವರು ಹೇಳಿದ್ದಾರೆ.

ಚಿಕ್ಕಂದಿನಿಂದ ನೋಡಿದ್ದೇನೆ

ಹಿರಿಯ ನಟ ಶಿವರಾಮಣ್ಣ ಅವರನ್ನು ಚಿಕ್ಕಂದಿನಿಂದ ನೋಡಿ ಬೆಳೆದಿದ್ದೇನೆ. ಯಡಿಯೂರು ಸಿದ್ದಲಿಂಗೇಶ್ವರ ಧಾರವಾಹಿಯಲ್ಲಿ ಅವರು ನಟಿಸಿದ್ದರು. ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ಮೇಲೆ ಅವರ ಒಡನಾಟ ಹೆಚ್ಚಿತ್ತು. ಇದ್ದಕ್ಕಿದ್ದ ಹಾಗೆ ಅವರ ಅಗಲಿಕೆಯ ನೋವು ತಂದಿದೆ ಎಂದು ನಟ ನವೀನ್ ಕೃಷ್ಣ ಹೇಳಿದ್ದಾರೆ

ಸ್ನೇಹಜೀವಿ

ಶಿವರಾಮಣ್ಣ ಅವರು ಸ್ನೇಹ ಜೀವಿಯಾಗಿದರು ಎಲ್ಲಾ ಕಲಾವಿದರೊಂದಿಗೆ ವಿಕಟ ಸಂಪರ್ಕ ಹೊಂದಿದ್ದರು. ಕಷ್ಟ-ಸುಖಗಳ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಆಧ್ಯಾತ್ಮಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹಿರಿಯ ಪೋಷಕ ಕಲಾವಿದ ಬ್ಯಾಂಕ್ ಜನಾರ್ಧನ್ ಹೇಳಿದ್ದಾರೆ.
ಶಿವರಾಮಣ್ಣ ಅವರ ಅಗಲಿಕೆಯ ನೋವು ತಂದಿದೆ. ಅಪರೂಪದ ವ್ಯಕ್ತಿ ಆಗಲಿರುವುದು ನೋವು ತಂದಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಷಕ ಕಲಾವಿದರ ಪರವಾಗಿ ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ.

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಹಿರಿಯ ನಟ ನಿರ್ದೇಶಕ ನಿರ್ಮಾಪಕ ಎಸ್.ಶಿವರಾಮ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬನಶಂಕರಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

ಧಾರ್ಮಿಕ ವಿಧಿ ವಿಧಾನಗಳಂತೆ ಕುಟುಂಬದ ಸದಸ್ಯರು ಶಿವರಾಂ ಪಾರ್ಥಿವ ಶರೀರಕ್ಕೆ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಚಿತ್ರರಂಗದ ಹಲವು ಮಂದಿ ಭಾಗಿಯಾಗಿ ಆಗಲಿದೆ ನಟನನ್ನು ನೆನೆದು ಕಣ್ಣೀರು ಸುರಿಸಿದರು.

ಈ ಮೂಲಕ ಕನ್ನಡ ಚಿತ್ರರಂಗದ ಮಾಹಿತಿ ಭಂಡಾರವಾಗಿದ್ದ ಮತ್ತು ಎಲ್ಲಾ ಕಲಾವಿದರಿಗೂ ಬೇಕಾಗಿದ್ದ ಅಪರೂಪದ ವ್ಯಕ್ತಿ ಇನ್ನು ನೆನಪು ಮಾತ್ರ.

ಪಾರ್ಥಿವ ಶರೀರದ ಅಂತ್ಯಕ್ರಿಯೆ ಮುನ್ನ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಕನ್ನಡ ಚಿತ್ರರಂಗದ ಹಿರಿಯ-ಕಿರಿಯ ಮಂದಿ ಅಗಲಿದ ಹಿರಿಯ ಕಲಾವಿದನನ್ನು ನೆನೆದು ಕಂಬನಿ ಮಿಡಿದರು

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ನಂತರ ಅಲ್ಲಿಂದ ತ್ಯಾಗರಾಜನಗರದಲ್ಲಿರುವ ಮನೆಯಲ್ಲಿ ಪೂಜೆ ನೆರವೇರಿಸಿ ನಂತರ ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಶಿವರಾಮಣ್ಣ ಅವರು ಅಯ್ಯಪ್ಪ ಸ್ವಾಮಿ ಭಕ್ತರು ಮತ್ತು ಆರಾಧಕರು ಆಗಿದ್ದ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ ಭಜನೆ ಪೂಜೆ ಮಾಡುವ ಮೂಲಕ ಸ್ವಾಮೀಗಳು ಅಂತಿಮ ನಮನ ಸಲ್ಲಿಸಿದರು.

ಅಪಘಾತದಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ಬಂದಿದ್ದ ಹಿರಿಯ ಕಲಾವಿದರಾದ ಅವರು ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ಪ್ರಜ್ಞೆ ತಪ್ಪಿದ್ದರು.

ಕುಟುಂಬದ ಸದಸ್ಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಇಹಲೋಕ ತ್ಯಜಿಸಿದರು.