ಹಿರಿಯ ನಟಿ ಬಿ.ಜಯಾ ನಿಧನಕ್ಕೆ ಸುನೀಲ್ ಪುರಾಣಿಕ್ ಸಂತಾಪ

ಬೆಂಗಳೂರು, ಜೂ.3- ಕನ್ಡಡ ಚಿತ್ರರಂಗದ ಹಿರಿಯ ನಟಿ ಬಿ.ಜಯಾ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ, ಕಿರುತೆರೆಯ ಹಿರಿಯ ನಟಿ ಬಿ.ಜಯಾ ಅವರ ನಿಧನದ ಸುದ್ದಿ ತೀವ್ರ ಬೇಸರ ತರಿಸಿದೆ. ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದಿದ್ದಾರೆ

ಕೊರೋನಾ ಸಂದರ್ಭದಲ್ಲಿ ಅವರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲೂ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಸರ್ಕಾರ ನೆರವಾಗಿತ್ತು. ಅಲ್ಲದೆ, ಚಲನಚಿತ್ರ ಅಕಾಡೆಮಿ ಮೂಲಕ ಅವರಿಗೆ ನೆರವನ್ನು ನೀಡಲಾಗಿತ್ತು. ಆದಾಗ್ಯೂ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಇದು ತೀವ್ರ ನೋವಿನ ಸಂಗತಿ ಎಂದು ತಿಳಿಸಿದ್ದಾರೆ.

ಬಿ.ಜಯಾ ಅವರು ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ ಹಾಸ್ಯನಟಿ. ನರಸಿಂಹರಾಜು ಮತ್ತು ದ್ವಾರಕೀಶ್ ಜೋಡಿಯಾಗಿ ಅವರ ಪಾತ್ರಗಳು ಬಹು ಜನಪ್ರಿಯ. ಅಲ್ಲದೆ ಇತ್ತೀಚಿನ ತಲೆಮಾರಿನ ಹಿರಿ, ಕಿರಿತೆರೆಯ ನಟ, ನಟಿಯರೊಂದಿಗೆ ಅಭಿನಯಿಸಿರುವ ಹೆಗ್ಗಳಿಕೆ ಅವರದು. ಅಲ್ಲದೆ ರಂಗಭೂಮಿಯಲ್ಲೂ ತಮ್ಮ ಅಭಿನಯ ಛಾಪನ್ನು ಮೂಡಿಸಿದ್ದವರು ಎಂದಿದ್ದಾರೆ.

ಬಿ.ಜಯಾ ಅವರ ಅಗಲಿಗೆ ಅಭಿನಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಭಗವಂತ ಕರುಣಿಸಲಿ ಎಂದು ಪುರಾಣಿಕ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.