ಹಿರಿಯ, ಚತುರ್ಭಾಷಾ ಸಾಹಿತಿ ಸಂಗಣ್ಣ ಹೊತಪೇಟೆ ಇನ್ನಿಲ್ಲ

ಯಾದಗಿರಿ;ಸೆ.15: ಬಹುಭಾಷಾ ಕವಿಗಳಾಗಿದ್ದ, ಹಿರಿಯ ಸಾಹಿತಿ, ಚಿತ್ರಕಲಾವಿದ, ಕಥೆಗಾರರೂ ಜಿಲ್ಲೆಯ ಹಿರಿಯ ಸಾಹಿತಿ ಸಂಗಣ್ಣ ಹೊತಪೇಟೆ ಅವರು ಸೋಮವಾರ ನಿಧನರಾದರು.
ಶಹಾಪೂರದ ಅಳಿಯನ ಮನೆಯಲ್ಲಿದ್ದ ಅವರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು, ಹೃದಯಾಘಾತದಿಂದ ನಿಧನ ಹೊಂದಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸುಮಾರು 30 ಕ್ಕೂ ಹೆಚ್ಚು ಕೃತಿಗಳನ್ನು ಬರೆದ ಅವರು ಕನ್ನಡ, ಹಿಂದಿ ಇಂಗ್ಲಿಷ್ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಕವಿತೆಗಳನ್ನು ರಚಿಸಿ ಜಿಲ್ಲೆಯ ಚತುರ್ಭಾಷಾ ಕವಿ ಎಂದು ಅಭಿದಾನ ಹೊಂದಿದ್ದರು.
ಮೃತರು ಪತ್ನಿ ಓರ್ವ ಪುತ್ರ ಹಾಗೂ ಐದು ಜನ ಹೆಣ್ಣು ಮಕ್ಕಳು ಬಿಟ್ಟು ಅಗಲಿದ್ದಾರೆ. ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.
ಸಂತಾಪ: ಚುತರ್ಭಾಷಾ ಕವಿಯಾಗಿದ್ದ ಹಿರಿಯ ಸಾಹಿತಿ ಸಂಗಣ್ಣ ಹೋತಪೇಟೆ ನಿಧನಕ್ಕೆ ವಿವಿಧ ಸಂಘಟನೆಗಳ ಪ್ರಮುಖರು ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕ ಹೇಳಿಕೆಗಳನ್ನು ನೀಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ, ವೀರಭಾರತಿ ಪ್ರತಿಷ್ಠಾನ ಹಾಗೂ ಗಾನಯೋಗಿ ಸಂಗೀತ ಪರಿಷತ್ತು ಜಿಲ್ಲಾಧ್ಯಕ್ಷ ವೈಜನಾಥ ಹಿರೇಮಠ, ಸಗರ ನಾಡು ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕಾರ್ ಸೇರಿದಂತೆ ಅನೇಕರು ದುಃಖ ವ್ಯಕ್ತಪಡಿಸಿದ್ದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು, ಕುಟುಂಬ ವರ್ಗಕ್ಕೆ ಧುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.