ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್ ಕೋವಿಡ್‌ನಿಂದ ಸಾವು

ಬೆಂಗಳೂರು, ಮೇ ೫- ಕನ್ನಡದ ಹಿರಿಯ ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ (೭೨) ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಂದು ಮುಂಜಾನೆ ಕೊನೆಯುಸಿರೆಳದಿದ್ದಾರೆ
ಜರಗನಹಳ್ಳಿ ಶಿವಶಂಕರ್ ಅವರು ೧೯೪೯ ಸೆಪ್ಟೆಂಬರ್ ೮ ರಂದು ಬೆಂಗಳೂರಿನ ಜರಗನಹಳ್ಳಿಯಲ್ಲಿ ಜನಿಸಿದ್ದು, ಬಿಕಾಂ ಪದವೀಧರರಾಗಿದ್ದ ಇವರು ಕೆನರಾ ಬ್ಯಾಂಕ್‌ನಲ್ಲಿ ೨೮ ವರ್ಷಗಳ ಕಾಲ ಸೇವೆ ಸಲ್ಲಿಸಿ ೨೦೦೧ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು.
ತಮ್ಮ ಚುಟುಕುಗಳಿಂದಲೇ ಜನಪ್ರಿಯತೆ ಪಡೆದ ಜರಗನಹಳ್ಳಿ ಶಿವಶಂಕರ್, ಚುಟುಕು ರತ್ನ ಎಂಬ ಬಿರುದಿಗೆ ಭಾಜನರಾಗಿದ್ದರು. ಬ್ಯಾಂಕ್ ಉದ್ಯೋಗದ ಜತೆ ಕನ್ನಡದ ಸಾಹಿತ್ಯದ ಒಲವನ್ನು ಬೆಳೆಸಿಕೊಂಡು ಮೌಲ್ಯಿತ ಕೃತಿಗಳನ್ನು ರಚಿಸಿದ್ದಾರೆ. ದೇಶ ವಿದೇಶಗಳ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕಮ್ಮಟಗಳಲ್ಲಿ ಭಾಗವಹಿಸಿ ಕನ್ನಡ ಸಂಸ್ಕೃತಿ ಪ್ರಚಾರಕ್ಕೆ ದುಡಿದಿದ್ದರು.
ಸಾಹಿತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದ ಅವರು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕೊಟ್ಟ ಕೊಡುಗೆ ಅನನ್ಯವಾದದ್ದು.
ಚುಟುಕು ಕವಿ ಎಂದೇ ಹೆಸರಾಗಿದ್ದ ಜರಗನಹಳ್ಳಿ ಶಿವಶಂಕರ್, ೫೦ ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜರಗನಹಳ್ಳಿ ಶಿವಶಂಕರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಪ್ರತಿ ಹುಣ್ಣಿಮೆ ದಿನ ತಮ್ಮ ಮನೆಯಲ್ಲೇ ಚುಟುಕು ಕವಿಗೋಷ್ಠಿಯನ್ನು ಅವರು ನಡೆಸುತ್ತಿದ್ದರು. ಶರಣ ಸಾಹಿತ್ಯ ಪರಿಷತ್‌ನ ಉಪಾಧ್ಯಕ್ಷರಾಗಿದ್ದ ಜರಗನಹಳ್ಳಿ ಶಿವಶಂಕರ್, ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಪ್ರಥಮ ಚುಟುಕು ಸಮ್ಮೇಳನವನ್ನು ಜರಗನಹಳ್ಳಿ ಶಿವಶಂಕರ್ ಆಯೋಜಿಸಿದ್ದರು. ಇವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಅಪರೂಪದ ಮಾನವತಾವಾದಿಯನ್ನು ಕಳೆದುಕೊಂಡಂತಾಗಿದೆ.
ಹಲವು ಕನ್ನಡಪರ ಸಂಘಟನೆಗಳ ಒಡನಾಡಿಯಾಗಿ, ಸಂಘಟಕರಾಗಿ, ಸಾಮಾಜಿಕವಾಗಿ ಸೇವೆ ಸಲ್ಲಿಸಿದ್ದ ಇವರು, ಸಾಂಸ್ಕೃತಿಕ ಸೇವೆ ಸದಾ ಸ್ಮರಣೀಯ.
ಸಾಹಿತಿ ಜರಗನಹಳ್ಳಿ ಶಿವಶಂಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಸಚಿವ ಸೋಮಣ್ಣ ಸೇರಿದಂತೆ ಹಲವು ಸಚಿವರು, ಶಾಸಕರು ಸಂತಾಪ ವ್ಯಕ್ತಪಡಿಸಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಭರಣ ಸೇರಿದಂತೆ ಹಲವು ಸಾಹಿತಿಗಳು,ಕ ಲಾವಿದರುಗಳು ಇವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.