ಹಿರಿಯ ಕವಿಗಳನ್ನು ಹೊಂದಿರುವ ಈ ನಾಡು ಪಾವನ, ಜೆಸ್ಕಾಂ ಕಚೇರಿಯಲ್ಲಿ ಕನ್ನಡ ಸಂಘಕ್ಕೆ ಕೊಠಡಿ: ಪಾಂಡ್ವೆ

ಕಲಬುರಗಿ:ನ.1: ಹಿರಿಯ ಕವಿಗಳನ್ನು ಹೊಂದಿರುವ ಈ ನಾಡು ನಿಜಕ್ಕೂ ಪಾವನ. ಕಲಬುರಗಿ ವಿದ್ಯುತ್ ಪ್ರಸರಣಾ ನಿಗಮದ ಕಚೇರಿಯ ಆವರಣದಲ್ಲಿ ಕನ್ನಡ ಸಂಘದ ಬೇಡಿಕೆಯಂತೆ ಒಂದು ಕೊಠಡಿ ನೀಡುವುದಾಗಿ ನಿಗಮದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ತುಕಾರಾಂ ಪಾಂಡ್ವೆ ಅವರು ಘೋಷಿಸಿದರು.
ಭಾನುವಾರ ಕಚೇರಿಯ ಆವರಣದಲ್ಲಿ 65ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ನಾವು 65ನೇ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ತುಂಬಾ ಹರ್ಷದಾಯಕ ಸಂಗತಿ. ಎಲ್ಲ ಅಧಿಕಾರಿಗಳಿಗೂ ಹಾಗೂ ನೌಕರರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸುವೆ ಎಂದರು.
ನಮ್ಮ ಕನ್ನಡ ನಾಡು ಎಲ್ಲ ರೀತಿಯಿಂದಲೂ ಸಂಪದ್ಭರಿತವಾಗಿದೆ. ಅಂತರ್ ರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುವಂತಹ ಅಭಿಯಂತರ ಸರ್. ಎಂ. ವಿಶ್ವೇಶ್ವರಯ್ಯ ಅವರಾಗಲೀ, ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಕವಿಗಳಾದ ಪಂಪ, ರನ್ನ, ಹರಿಹರ, ಲಕ್ಷ್ಮೀಶ್, ಕುಮಾರವ್ಯಾಸ, ಕುವೆಂಪು, ಕೆ.ಎಸ್. ನಿಸ್ಸಾರ್ ಅಹ್ಮದ್ ಮುಂತಾದ ಹಿರಿಯ ಕವಿಗಳನ್ನು ಹೊಂದಿದ ಈ ನಾನು ನಿಜಕ್ಕೂ ಪಾವನ ಎಂದು ಅವರು ಬಣ್ಣಿಸಿದರು.
ಇನ್ನು ರಾಷ್ಟ್ರೀಯ ಭಾಷೆ ಹಿಂದಿಗೆ ಅತೀ ಹೆಚ್ಚಿನ ಅಂದರೆ 10 ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಪ್ರಾದೇಶಿಕ ಭಾಷೆಗಳಲ್ಲಿ ಅತೀ ಹೆಚ್ಚು 8 ಜ್ಞಾನ ಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ಇದು ನಿಜಕ್ಕೂ ಹೆಮ್ಮೆ ತರಿಸುವಂಥದ್ದು. ಎಂಟು ಜನ ಕವಿ ರತ್ನಗಳನ್ನು ಹೆತ್ತ ಕನ್ನಡ ತಾಯಿ ಧನ್ಯ ಎಂದು ಅವರು ಹೇಳಿದರು.
ಅದೂ ಅಲ್ಲದೇ ಕಳೆದ 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ. ಇಂತಹ ಶಾಸ್ತ್ರೀಯ ಸ್ಥಾನಮಾನ ಕೆಲವೇ ಕೆಲವು ಪ್ರಾದೇಶಿಕ ಭಾಷೆಗಳಿಗೆ ಲಭಿಸಿದೆ. ಅದರಲ್ಲಿ ಕನ್ನಡವೂ ಒಂದು ಎಂಬುದು ಹೆಮ್ಮೆ ತರುವಂಥದ್ದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರವು ಸಹ ರಾಜ್ಯಭಾಷೆಯನ್ನಾಗಿ ಕನ್ನಡ ಜಾರಿಗೆ ತಂದಿದೆ. ಆದ್ದರಿಂದ ಕಂಪೆನಿಯ ಎಲ್ಲ ವ್ಯವಹಾರಗಳಲ್ಲಿಯೂ ಕನ್ನಡವನ್ನು ಬಳಸುವ ಹಾಗೂ ಬೆಳೆಸಲು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಕರೆ ನೀಡಿದರು.
ಕನ್ನಡ ಸಂಘದವರು ಕನ್ನಡ ಸಂಘದ ಕಟ್ಟಡಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದು, ಅದನ್ನು ಪುರಸ್ಕರಿಸಿರುವೆ. ಕಚೇರಿಯ ಆವರಣದಲ್ಲಿಯೇ ಒಂದು ಕೊಠಡಿಯನ್ನು ನೀಡಲು ಸೂಚಿಸಿದ ಅವರು, ಕನ್ನಡ ಸಂಘವು ತನ್ನ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಕೈಗೊಂಡು ಕನ್ನಡ ಭಾಷೆಯನ್ನು ಬೆಳೆಸುವ ಹಾಗೂ ಬಳಸುವ ದಿಸೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಕನ್ನಡ ಸಂಘ ಸಮೃದ್ಧವಾಗಿ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು. ವೇದಿಕೆಯ ಮೇಲೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ನೌಕರರ ಸಂಘದ ಉಪಾಧ್ಯಕ್ಷ ನೀಲಪ್ಪ ಧೋತ್ರೆ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಕಲ್ಯಾಣ ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್. ಬುದ್ದಾ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ಡಿಪ್ಲೋಮಾ ಇಂಜಿನಿಯರುಗಳ ಸಂಘದ ಉಪಾಧ್ಯಕ್ಷ ಮನೋಹರ್ ವಾಘ್ಮೋರೆ, ನಿಗಮದ ಕಚೇರಿಯ (ಕಾರ್ಯಾಚರಣೆ) ಮುಖ್ಯ ಅಭಿಯಂತರ ಲಕ್ಷ್ಮಣ್ ಚವ್ಹಾಣ್, ಸುಭಾಷ್ ಭೋಸಲೆ, ಜೆಸ್ಕಾಂ ಲೆಕ್ಕಾಧಿಕಾರಿಗಳ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಅನಿಲ್ ಮುಗಳಿ, ಜೆಸ್ಕಾಂ ಕನ್ನಡ ಸಂಘದ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷ ಸಿದ್ರಾಮ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.