ಹಿರಿಯ ಅಭಿನೇತ್ರಿ ಲೀಲಾವತಿ ನಿಧನಕ್ಕೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ

ಬೆಳಗಾವಿ,ಡಿ.೧೧-ಬಹುಭಾಷಾ ನಟಿ ಕನ್ನಡ ಚಿತ್ರರಂಗದ ಹಿರಿಯ ಅಭಿನೇತ್ರಿ ಡಾ.ಲೀಲಾವತಿ ಅವರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಗೌರವ ಸೂಚಿಸಲಾಯಿತು.
ಸಂತಾಪ ಸೂಚಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಲವರು ಬದುಕಿದ್ದಾಗಲೂ ಸತ್ತಂತಿರುತ್ತಾರೆ. ಇನ್ನೂ ಕೆಲವರು ಸತ್ತ ಮೇಲೂ ಬದುಕಿರುತ್ತಾರೆ ಅಂತಹವರ ಸಾಲಿಗೆ ಲೀಲಾವತಿ ಸೇರುತ್ತಾರೆ ಎಂದರು.
ತಾವು ಬಂಧೀಖಾನೆ ಮಂತ್ರಿಯಾಗಿದ್ದಾಗ ಲೀಲಾವತಿ ಅವರು ಚಿತ್ರವೊಂದರ ಚಿತ್ರೀಕರಣಕ್ಕೆ ಇಲಾಖೆಗೆ ಹಣ ಭರ್ತಿ ಮಾಡಿ ಬಂಧೀಖಾನೆ ಇಲಾಖೆಯಿಂದ ಜೈಲಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡಿದ್ದರು. ಆದರೆ ಆಗಿನ ಮುಖ್ಯಮಂತ್ರಿ ಬಂಗಾರಪ್ಪ ಅವರ ಕಚೇರಿಯಿಂದ ದೂರವಾಣಿ ಕರೆಯೊಂದು ಹೋಗಿತ್ತು. ಅದಕ್ಕಾಗಿ ಒತ್ತಡ ಹಾಕಿದ್ದವರು ಯಾರು ಎಂದು ನಾನು ಹೇಳ ಬಯಸುವುದಿಲ್ಲ ಆದರೆ ಅನುಮತಿ ನಿರಾಕರಿಸಲಾಗಿತ್ತು. ಆ ವೇಳೆ ಲೀಲಾವತಿಯವರು ತಮ್ಮ ಬಳಿ ಬಂದು ಕಷ್ಟ ಹೇಳಿಕೊಂಡಿದ್ದರು.
ಎಲ್ಲರಿಗೂ ನಾವು ಅನುಮತಿ ಕೊಡುವುದಾದರೆ ಲೀಲಾವತಿಯವರಿಗೆ ಏಕೆ ಅವಕಾಶ ನಿರಾಕರಿಸಬೇಕೆಂದು ತಾವು ಮಧ್ಯಪ್ರವೇಶ ಮಾಡಿ, ಅನುಮತಿ ಕೊಡಿಸಿದ್ದಾಗಿ ತಿಳಿಸಿದರು.
ಸ್ವಾಭಿಮಾನ, ಬಡತನದ ಜೊತೆಗೆ ಅಜಾತಶತ್ರುವಾಗಿದ್ದ ಲೀಲಾವತಿಯವರು ಹೃದಯ ಶ್ರೀಮಂತಿಕೆ ಹೊಂದಿದ್ದರು. ಜನರ ಆರೋಗ್ಯದ ಚಿಕಿತ್ಸೆಗೆ ಆಸ್ಪತ್ರೆ ಕಟ್ಟಿಸುವುದು ಸಾಮಾನ್ಯ. ಆದರೆ ಲೀಲಾವತಿಯವರು ಪ್ರಾಣಿಗಳ ಮೇಲಿನ ಪ್ರೀತಿಯಿಂದ ಪಶು ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಅದರ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಲು ಬಂದಾಗ ಅವರಿಗಿನ್ನೂ ಆರೋಗ್ಯ ಚೆನ್ನಾಗಿತ್ತು ಮಾತನಾಡುತ್ತಿದ್ದರು.ಎಲ್ಲವನ್ನೂ ಗುರುತಿಸುತ್ತಿದ್ದರು. ಆದರೆ ವೆಂಟಿಲೇಟರ್ ನಲ್ಲೇ ನಮ್ಮ ಮನೆಗೆ ಬಂದಿದಿದ್ದರು. ಆ ಸ್ಥಿತಿಯಲ್ಲಿ ತಾಯಿಯನ್ನು ಕರೆತಂದಿದ್ದಕ್ಕಾ?ಗಿ ವಿನೋದ್ ರಾಜ್ ರನ್ನು ತಾವು ತರಾಟೆಗೆ ತೆಗೆದುಕೊಂಡಿದ್ದಾಗಿ ಡಿ.ಕೆ.ಶಿವಕುಮಾರ್ ಹೇಳಿದರು.
ತಮ್ಮ ರಾಜಕೀಯ ಜೀವನದಲ್ಲಿ ಪಶುಗಳಿಗಾಗಿ ಆಸ್ಪತ್ರೆ ಕಟ್ಟಿಸಿದವರನ್ನು ನಾನು ನೋಡಿರಲಿಲ್ಲ, ಪರೋಪಕಾರದಲ್ಲೇ ಬದುಕಿದ್ದ ಲೀಲಾವತಿಯವರು ದೈವೀಗುಣಗಳ, ಶಾಂತ ಸ್ವಭಾವದ, ಹೃದಯ ಶ್ರೀಮಂತಿಕೆಯ ಅಭಿನೇತ್ರಿ ಎಂದು ಕೊಂಡಾಡಿದರು.
ಇದಕ್ಕೂ ಮುನ್ನ ವಿಧಾನಸಭೆಯ ಕಲಾಪ ಆರಂಭವಾದ ಕೂಡಲೇ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂತಾಪ ಸೂಚಕ ಮಂಡಿಸಿ ೧೯೩೮ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಬಹುಭಾಷಾ ಚಿತ್ರನಟಿ ಡಾ.ಲೀಲಾವತಿ ಸುಬ್ಬಯ್ಯನಾಯ್ಡು ಅವರ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸೇರಿ, ನಾಗಕನ್ನಿಕೆ ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದರು.
ಕನ್ನಡ, ತುಳು, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳ ಮೂಲಕ ೫ ದಶಕಗಳ ಕಾಲ ೬೦೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ ಲೀಲಾವತಿ ಅವರು ಭಿನ್ನ ಹಾಗೂ ವೈಭಿನ್ನದ ಪಾತ್ರದಲ್ಲಿ ಕಪ್ಪು?-ಬಿಳುಪು ಕಾಲದಿಂದ ಕಲರ್ ಸ್ಕೋಪ್ ವರೆಗಿನ ಎಲ್ಲಾ? ನಾಯಕ ನಟರೊಂದಿಗೆ ನಟಿಸಿ ಜನಪ್ರಿಯರಾಗಿದ್ದರು.
ಕಾಲೇಜ್ ಹೀರೋ ಚಿತ್ರವನ್ನು ನಿರ್ಮಿಸಿದ್ದ ಅವರು ಕನ್ನಡದ ಕಂದ ಚಲನಚಿತ್ರಕ್ಕೆ ಚಿತ್ರಕಥೆ ಬರೆದಿದ್ದರು.ಸಮಾಜಸೇವಕಿ ಹಾಗೂ ಪಶುಪ್ರೇಮಿಯಾಗಿದ್ದ ಅವರು ಅಪಾರ ಕೃಷಿ ಜ್ಞಾನವನ್ನೂ ಹೊಂದಿದ್ದರು. ತಮ್ಮ ಸ್ವಂತ ಹಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಚಿಕಿತ್ಸಾ?ಲಯ ಕಟ್ಟಿಸಿ ಉಚಿತ ಸೇವೆ ಒದಗಿಸಲು ಕಾರಣರಾಗಿದ್ದರು.
ಡಾ.ರಾಜ್ ಕುಮಾರ್ ಪ್ರಶಸ್ತಿ, ಅತ್ಯುತ್ತಮ ಪೋಷಕ ನಟಿ, ಫಿಲೇಂಫೇರ್ ಪ್ರಶಸ್ತಿ, ತುಮಕೂರು ವಿ.ವಿ. ಯಿಂದ ಗೌರವ ಡಾಕ್ಟರೇಟ್ ಪಡೆದಿದ್ದ ಅವರು ಡಿ.೮ ರಂದು ನಿಧನರಾಗಿದ್ದು ನಾಡಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಬಣ್ಣಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ , ಲೀಲಾವತಿ ಅಗಲಿಕೆಯ ಹಿನ್ನೆಲೆಯಲ್ಲಿ ಮಂಡಿಸಲಾಗುವ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸುವುದಾಗಿ ಹೇಳಿದರು.
ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ ಅವರು ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾಗಿದ್ದರು. ನಾಯಕಿಯಾಗಿದ್ದ ಅವರು ಪೋಷಕ ನಟಿಯಾಗಿ ಪರಿವರ್ತನೆಗೊಂಡಿದ್ದ ಅವರು ಸಮಾಜಸೇವಕಿಯಾಗಿ ಗುರುತಿಸಿಕೊಂಡಿದ್ದರು.
ಅಪರೂಪದ ತಾರೆಯಾಗಿರುವ ಲೀಲಾವತಿಯವರ ಅಗಲುವಿಕೆ ಜಗತ್ತಿಗೆ ತುಂಬಲಾರದ ನಷ್ಟ ಅವರ ಆತ್ಮಕ್ಕೆ sಚಿಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ವಿಪಕ್ಷ ನಾಯಕ ಅಶೋಕ್, ಉತ್ತರಹಳ್ಳಿಯಲ್ಲಿ ಅವರ ಜಮೀನಿತ್ತು. ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ ತಗಾದೆಗಳಿದ್ದಾಗ ಸಚಿವರಾಗಿದ್ದ ತಮ್ಮ ಬಳಿಗೆ ಬಂದು ವಿಷಯ ತಿಳಿಸಿದ್ದರು. ತಾವು ಕಂದಾಯ ಸಚಿವರಾಗಿದ್ದಾಗಲೂ ತಮ್ಮನ್ನು ಭೇಟಿ ಮಾಡಿದ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ಪಶು ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದರು.
ತಮಗೆ ಯಾವುದೇ ಪ್ರಶಸ್ತಿ ಬೇಡ. ಪ್ರಾಣಿಗಳ ಚಿಕಿತ್ಸಾಲಯ ಸ್ಥಾಪನೆಗೆ ಸರ್ಕಾರದಿಂದ ಅನುಮತಿ ಕೊಡಿಸಿ ಎಂಬುಂದು ಅವರ ಮನವಿಯಾಗಿತ್ತು. ತಾವು ಅವರನ್ನು ಮುಖ್ಯಮಂತ್ರಿಯ ಬಳಿಗೆ ಕರೆದುಕೊಂಡು ಹೋಗಿ ಅನುಮತಿ ಕೊಡಿಸಿದ್ದಾಗಿ ಹೇಳಿದರು.
ಲೀಲಾವತಿ ಅವರೇ ನಿರ್ಮಿಸಿರುವ ಆಸ್ಪತ್ರೆ ಮುಂದೆ ಮೇರುನಟಿಯ ಪ್ರತಿಮೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ನ ಸಿ.ಎ ಬಾಲಕೃಷ್ಣ ಅವರು ತಾಯಿ-ಮಗನ ಬಾಂಧವ್ಯ ಸಮಾಜಕ್ಕೆ ಮಾದರಿ ಎಂದು ಬಣ್ಣಿಸಿದರು
ಸಂತಾಪ ಸೂಚಕ ಬಳಿಕ ವೌನಾಚರಣೆಯ ಮೂಲಕ ಸದನ ಅಗಲಿದ ಹಿರಿಯ ಚೇತನಕ್ಕೆ ಶ್ರದ್ದಾಂಜಲಿ ಸಲ್ಲಿಸಿತು.