ಹಿರಿಯರು ಅನುಭವದ ಕಣಜವಿದ್ದಂತೆ ಗೌರವದಿಂದ ಕಾಣಬೇಕು ಮಕ್ಕಳಂತೆ ಪ್ರೀತಿಸ ಬೇಕು

ಕೆಂಭಾವಿ:ಜ.13: ಇಂದಿನ ದಿನಮಾನಗಳಲ್ಲಿ ಕುಟುಂಬಕ್ಕೆ ಒಬ್ಬರು ಹಿರಿಯ ಜೀವಿಯ ಅವಶ್ಯಕತೆ ಹೆಚ್ಚಾಗಿದ್ದು ಯುವ ಪೀಳಿಗೆಯನ್ನು ತಿದ್ದಿ ತೀಡುವ ಕೆಲಸ ಹಿರಿಯರು ಮಾಡುತ್ತಿದ್ದಾರೆ ಎಂದು ಹಿರಿಯ ಚಿಂತಕ ಸುಮಿತ್ರಪ್ಪ ಅಂಗಡಿ ಹೇಳಿದರು.
ಪಟ್ಟಣದ ಸ್ಪಂದನ ಶಾಲೆಯಲ್ಲಿ ಬುಧವಾರ ಹಳೆ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಹಿರಿಯ ನಿವೃತ ಶಿಕ್ಷಕ ಬಸವಂತ್ರಾಯ ಪಾಟೀಲರ 92ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮತನಾಡಿದ ಅವರು ಅವಿಭಕ್ತ ಕುಟುಂಬಕ್ಕೆ ಹಿರಿಯರು ನೀಡುವ ಸಲಹೆ ಸೂಚನೆಗಳು ಎಲ್ಲರಿಗೂ ಮಾರ್ಗದರ್ಶಕವಾಗಿವೆ ತಮ್ಮ 92ನೇ ವಯಸ್ಸಿನಲ್ಲೂ ಹೆಚ್ಚು ಉತ್ಸಾಹಭರಿತರಾಗಿ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವ ನಿವೃತ್ತ ಶಿಕ್ಷಕ ಪಾಟೀಲ ಅವರ ಕಾರ್ಯವೈಖರಿ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಪ್ರಾಧ್ಯಾಪಕ ಡಾ. ಯಂಕನಗೌಡ ಮಾತನಾಡಿ, ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಅನಂತ ವ್ಯತ್ಯಾಸವಿದ್ದು ಪ್ರತಿಯೊಂದು ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕಾದರೆ ಹಿರಿಯರ ಸಲಹೆ ಸೂಚನೆ ಅತ್ಯವಶ್ಯವಾಗಿದೆ ಎಂದರು. ತಮ್ಮ ಇಳಿವಯಸ್ಸಿನಲ್ಲೂ ಸತತ ಓದುವ ಹವ್ಯಾಸ ಇಟ್ಟುಕೊಂಡಿರುವ ಬಸವಂತ್ರಾಯ ಪಾಟೀಲ ಅವರ ಪುಸ್ತಕದ ಕಾಳಜಿ ಎಲ್ಲ ಯುವ ಜನಾಂಗಕ್ಕೆ ಮಾದರಿಯಾಗಲಿ ಎಂದು ಹೇಳಿದರು. ಸಂಜೀವರಾವ ಕುಲಕರ್ಣಿ, ಮಹಿಪಾಲರೆಡ್ಡಿ ಡಿಗ್ಗಾವಿ, ತಿಪ್ಪಣ್ಣ ಪೂಜಾರಿ ಮಾತನಾಡಿದರು. ಶ್ರೀ ಚನ್ನಬಸವ ಶಿವಾಚಾರ್ಯರು ಹಾಗೂ ಶ್ರೀ ಚನ್ನಯ್ಯ ಚಿಕ್ಕಮಠ ಸಾನಿಧ್ಯ ವಹಿಸಿದ್ದರು. ಬಂದೇನವಾಜ ನಾಲತವಾಡ ನಿರೂಪಿಸಿದರು, ಡಿ. ಸಿ. ಪಾಟೀಲ ಸ್ವಾಗತಿಸಿದರು, ಸುಜಿತ ಪಾಟೀಲ ವಂದಿಸಿದರು. ನಂತರ ಅನೇಕ ವಿದ್ಯಾರ್ಥಿಗಳಿಂದ ನಿವೃತ್ತ ಹಿರಿಯ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಡೆಯಿತು.


ನಮಗ ಪುಸ್ತಕದ ಜ್ಞಾನ ಮಸ್ತಕಕ್ಕ ಬರಬೇಕಾದೆ ನಾವು ಮೊದಲು ಮೊಬೈಲ್ ಬಿಟ್ಟು ಮಸ್ತ್ ಆಗಿ ಓದದು ಕಲಿಬೇಕು. ಓದುವ ಹವ್ಯಾಸ ಬೆಳೆಸಿಕೊಂಡಷ್ಟು ಜ್ಞಾನದ ಜೊತೆಗೆ ದೈಹಿಕ ಬಲ ಹೊಂದಲು ಸಾಧ್ಯ. ಇಂದಿನ ಶಿಕ್ಷಣ ಪದ್ಧತಿ ಅಧೋಗತಿಗೆ ಇಳಿದಿದ್ದು ಕಲಿಯುವ ಮತ್ತು ಕಲಿಸುವ (ವಿದ್ಯಾರ್ಥಿಗಳು ಮತ್ತು ಶಿಕ್ಷಕರು) ಮನಸ್ಸುಗಳೆರಡೂ ಮೊದಲು ಒಂದಾಗಬೇಕು ಅಂದಾಗ ಮಾತ್ರ ಶಿಕ್ಷಣಕ್ಕೆ ಮಹತ್ವ ಬರಲು ಸಾಧ್ಯ.
ಬಸವಂತ್ರಾಯ ಪಾಟೀಲ. ಹಿರಿಯ ನಿವೃತ್ತ ಶಿಕ್ಷಕ.