ಹಿರಿಯರನ್ನು ಗೌರವಿಸುವ ಸಂಸ್ಕøತಿ ಬೆಳೆಯಲಿ

ಕಲಬುರಗಿ:ಅ.1: ಸಮಾಜಕ್ಕೆ ಹಿರಿಯರು ಭಾರವಲ್ಲ. ಅವರು ತಮ್ಮಲ್ಲಿರುವ ಹಿರಿತನದ ಜ್ಞಾನ, ಅನುಭವವನ್ನು ಸಮಾಜಕ್ಕೆ ನೀಡಬೇಕು. ಕಿರಿಯರು ಅವರ ಅನುಭವದ ಮಾತುಗಳನ್ನು ಆಲಿಸಿ ಮುನ್ನಡೆಯಬೇಕು. ಎಂತಹ ಸಂದರ್ಭದಲ್ಲಿಯೂ ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ. ಅವರ ಇಳಿವಯಸ್ಸಿನಲ್ಲಿ ಅವರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡುವ ಭಾರತೀಯ ಶ್ರೇಷ್ಟ ಸಂಸ್ಕøತಿ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಹೇಳಿದರು.
ನಗರದ ಆಳಂದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡುತ್ತಿದ್ದರು.
ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಮಾತನಾಡುತ್ತಾ, ಪಾಶ್ಯಾತ್ಯ ಸಂಸ್ಕøತಿಯ ಪ್ರಭಾವದಿಂದಾಗಿ ಹಿರಿಯರಿಗೆ ಗೌರವ ನೀಡುವ ಪದ್ಧತಿ ಕಡಿಮೆಯಾಗುತ್ತಿರುವದು ವಿಷಾದನೀಯ ಸಂಗತಿ. ವೃದ್ಧಾಶ್ರಮಗಳು ಇದರ ಸಂಕೇತಗಳಾಗಿವೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಹಿರಿಯರ ಸೂಕ್ತ ಸಲಹೆ, ಮಾರ್ಗದರ್ಶನ ತುಂಬಾ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಜಿಲ್ಲಾ
ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಉಪನ್ಯಾಸಕ ಅಮರನಾಥ ಶಿವಮೂರ್ತಿ, ಉದ್ಯಮಿ, ಸಮಾಜ ಸೇವಕ ಜೀನೇಂದ್ರ ಸಾಗರಶೆಟ್ಟಿ, ನಬಿಲಾಲ್ ಮಕನದಾರ್ ಸೇರಿದಂತೆ ಮತ್ತಿತರರಿದ್ದರು.