ಹಿರಣ್ಯ ಚಿತ್ರೀಕರಣ ಪೂರ್ಣ

ಯುವ ನಟ  ರಾಜವರ್ಧನ್ ನಟನೆಯ ಬಹುನಿರೀಕ್ಷಿತ ಚಿತ್ರ ” ಹಿರಣ್ಯ ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.  ಬೆಂಗಳೂರು ಸುತ್ತಮುತ್ತ  96 ದಿನಗಳ ಕಾಲ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ತೆರೆಗೆ ತರುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.

ಚಿತ್ರದಲ್ಲಿ ನಟ ರಾಜವರ್ಧನ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಮುಂದಾಗಿದ್ದಾರೆ. ಹಿರಣ್ಯ ಚಿತ್ರಕ್ಕೆ ಪ್ರವೀಣ್ ಅವ್ಯುಕ್ತ್ ಆಕ್ಷನ್ ಕಟ್ ಹೇಳಿದ್ದಾರೆ. ಅನೇಕ ಕಿರುಚಿತ್ರ ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ. ಈ ಮೂಲಕ ನಿರ್ದೇಶಕರಾಗಿ  ‌ಕಮಾಲ್ ಮಾಡಲು ಮುಂದಾಗಿದ್ದಾರೆ.

ನಟರಾಜವರ್ಧನ್ ಗೆ ಜೋಡಿಯಾಗಿ ಮಾಡೆಲ್ ರಿಹಾನಾ ನಟಿಸಿದ್ದು, ಈ ಚಿತ್ರದ ಮೂಲಕ ರಿಹಾನಾ ಚಂದನವನ ಪ್ರವೇಶಿಸಿ ನೆಲೆ ಕಂಡಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಕಂಪ್ಲೀಟ್ ಆಕ್ಷನ್ ಥ್ರಿಲ್ಲರ್ ಜೊತೆಗೆ ತಾಯಿ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವಿಘ್ನೇಶ್ವರ. ಯು ಹಾಗೂ ವಿಜಯ್‌ ಕುಮಾರ್‌ ಬಿ.ವಿ “ಹಿರಣ್ಯ’ ಸಿನಿಮಾಗೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಯೋಗೇಶ್ವರನ್‌ ಆರ್‌ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೆಸುತ್ತಿದೆ.