
ಶಿಮ್ಲಾ,ಆ,21- ಮೇಘಸ್ಪೋಟ ಮತ್ತು ಭೂಕುಸಿತದಿಂದ ತತ್ತರಿಸಿರುವ ಹಿಮಾಚಲ ಪ್ರದೇಶದ ಕೋಲ್ ಡ್ಯಾಮ್ ಜಲಾಶಯದಲ್ಲಿ ಸಿಲುಕಿದ್ದ ಐವರು ಅರಣ್ಯಾಧಿಕಾರಿಗಳು ಸೇರಿದಂತೆ ಹತ್ತು ಮಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
ಮಂಡಿ ಜಿಲ್ಲೆಯ ಕೋಲ್ ಡ್ಯಾಮ್ ಹೈಡಲ್ ಯೋಜನೆಯಲ್ಲಿ ಸ್ಟೀಮರ್ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರಿನ ಮಟ್ಟ ಏರಿಕೆಯಿಂದಾಗಿ ಕೋಲ್ ಡ್ಯಾಮ್ ಜಲಾಶಯದಲ್ಲಿ ದೋಣಿಯಲ್ಲಿ ಸಿಲುಕಿಕೊಂಡಿದ್ದ ಹತ್ತು ಜನರನ್ನು ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಕ್ಷಿಸಲಾಗಿದೆ ಎಂದು ಮಂಡಿ ಜಿಲ್ಲೆಯ ಜಿಲ್ಲಾಡಳಿತ ತಿಳಿಸಿದೆ.
ಐವರು ಅರಣ್ಯ ಇಲಾಖೆಯ ಉದ್ಯೋಗಿಗಳಾದ ಭಾದೂರ್ ಸಿಂಗ್, ಭೂಪೇಶ್ ಠಾಕೂರ್, ರೂಪ್ ಸಿಂಗ್, ಬಾಬು ರಾಮ್ ಮತ್ತು ಅಂಗದ್ ಕುಮಾರ್. ಇತರ ಐವರು ಸ್ಥಳೀಯ ಜನರಾಗಿದ್ದು, ಅವರನ್ನು ನೈನ್ ಸಿಂಗ್, ಡಾಗು ರಾಮ್, ಹೇಮ್ ರಾಜ್, ಭೂಧಿ ಸಿಂಗ್ ಮತ್ತು ಧರ್ಮೇಂದ್ರ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸುರಕ್ಷಿತವಾಗಿ ಎಲ್ಲರನ್ನು ರಕ್ಷಣೆ ಮಾಡಿದೆ ಎಂದು ಮಾಹಿತಿ ನೀಡಿದೆ.