ಹಿಮಾಚಲ, ಗುಜರಾತ್ ಮತ್ತೆ ಬಿಜೆಪಿ ತೆಕ್ಕೆಗೆ

ನವದೆಹಲಿ,ನ.೫- ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆ ಬಿಂಬಿಸಿದೆ.

೧೮೨ ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ೧೧೯ ಸ್ಥಾನ ಹಾಗು ೬೮ ಸದಸ್ಯ ಬಲದ ಹಿಮಾಚಲ ಪ್ರದೇಶಲ್ಲಿ ೪೧ ಸ್ಥಾನ ಪಡೆಯುವ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿಯುವ ಮೂಲಕ ಅಧಿಕಾರ ಉಳಿಸಿಕೊಳ್ಳಲಿದೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನದಲ್ಲಿದೆ ಎಂದು ಇಂಡಿಯಾ ಟಿವಿ-ಮ್ಯಾಟ್ರಿಜ್ ಸಮೀಕ್ಷೆ ತಿಳಿಸಿದೆ.

ಹಿಮಾಚಲ ಪ್ರದೇಶಕ್ಕೆ ಈ ತಿಂಗಳ ೧೨ ರಂದು ಮತ್ತು ಗುಜರಾತ್ ವಿಧಾನಸಭೆಗೆ ಡಿಸೆಂಬರ್ ೧ ಮತ್ತು ೫ ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಎರಡೂ ರಾಜ್ಯಗಳ ಚುನಾವಣಾ ಫಲತಾಂಶ ಡಿಸೆಂಬರ್ ೮ ರಂದು ಪ್ರಕಟವಾಗಲಿದೆ.

ಗುಜರಾತ್‌ನಲ್ಲಿ ಸಮೀಕ್ಷೆಯ ಪ್ರಕಾರ, ೧೮೨ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ೧೧೯ ಸ್ಥಾನಗಳಲ್ಲಿ ಭಾರಿ ಬಹುಮತ ಪಡೆಯುವ ಸಾಧ್ಯತೆಗಳಿವೆ. ಕಾಂಗ್ರೆಸ್ ೫೯ ಸ್ಥಾನ, ಆಮ್ ಆದ್ಮಿ ಪಕ್ಷವು ಕೇವಲ ಮೂರು ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜು ಮಾಡಿದೆ.

೨೦೧೭ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೯೯ ಸ್ಥಾನ,ಕಾಂಗ್ರೆಸ್ ೮೧ ಸ್ಥಾನ ಮತ್ತು ’ಇತರರು’ ಎರಡು ಸ್ಥಾನಗಳನ್ನು ಗೆದ್ದಿದ್ದರು.ಮತದಾನದ ಶೇಕಡಾವಾರು ಪ್ರಮಾಣ ಬಿಜೆಪಿಗೆ ಶೇಕಡಾ ೫೧.೩, ಕಾಂಗ್ರೆಸ್ ೩೭.೨ ಶೇಕಡಾ ಮತ್ತು ಎಎಪಿ ಕೇವಲ ೭.೨ ಶೇಕಡಾ ಮತ ಸಿಗುವ ಸಾಧ್ಯತೆ ಇದೆ ಎಂದು ಹೇಳಿದೆ.

೨೦೧೭ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೪೮.೮ ಶೇಕಡಾವಾರು, ಕಾಂಗ್ರೆಸ್ ಶೇ.೪೨.೩ರಷ್ಟು ಮತ್ತು ‘ಇತರರು’ ಶೇಕಡಾ ೮.೯ ಮತಗಳನ್ನು ಪಡೆದಿದ್ದರು.

ಇನ್ನು ಹಿಮಾಚಲ ಪ್ರದೇಶದಲ್ಲಿ ೬೮ ಸ್ಥಾನಗಳ ಪೈಕಿ ಬಿಜೆಪಿ ೪೧ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಕಾಂಗ್ರೆಸ್ ೨೫ ಸ್ಥಾನಗಳನ್ನು ಗೆಲ್ಲಬಹುದು ಮತ್ತು ’ಇತರರು’ ಎರಡು ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜು ಮಾಡಲಾಗಿದೆ.

೨೦೧೭ ರ ಚುನಾವಣೆಯಲ್ಲಿ ಬಿಜೆಪಿ ೪೪ ಸ್ಥಾನ, ಕಾಂಗ್ರೆಸ್ ೨೧ ಮತ್ತು ’ಇತರರು’ ಮೂರು ಸ್ಥಾನಗಳನ್ನು ಗೆದ್ದಿದ್ದರು. ಶೇಕಡಾವಾರು ಮತದಾನದಲ್ಲಿ ಬಿಜೆಪಿ ೪೬.೨ ರಷ್ಟು, ಕಾಂಗ್ರೆಸ್ ೪೨.೩ ಶೇಕಡಾ, ಎಎಪಿ ೨.೩ ಶೇಕಡಾ ಮತ್ತು ಇತರರು ೯.೨ ಶೇಕಡಾ ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ.

ಹಿಮಾಚಲ ಪ್ರದೇಶದಲ್ಲಿ, ಅಕ್ಟೋಬರ್ ೧೫ ರಿಂದ ನವೆಂಬರ್ ೨ ರವರೆಗೆ ೬೮ ವಿಧಾನಸಭಾ ಕ್ಷೇತ್ರಗಳಲ್ಲಿ ೧೩,೬೦೦ (೮೧೬೦ ಪುರುಷರು, ೫೪೪೦ ಮಹಿಳೆಯರು) ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಲಾಗಿದೆ.

ಶೇ.೨೯ ರಷ್ಟು ಮಂದಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಸಾಧನೆ ’ತುಂಬಾ ಚೆನ್ನಾಗಿದೆ’ ಎಂದು ಹೇಳಿದ್ದಾರೆ. ೩೭ ರಷ್ಟು ಜನರು ಇದು ‘ಸರಾಸರಿ’ ಎಂದು ಹೇಳಿದರೆ, ೩೧ ರಷ್ಟು ಜನರು ಅವರ ಕಾರ್ಯಕ್ಷಮತೆ ‘ತುಂಬಾ ಕಳಪೆ’ ಎಂದು ಬಣ್ಣಿಸಿದ್ದಾರೆ.

ಶೇಕಡಾ ೪೩ ರಷ್ಟು ಜನರು ಈ ಬಾರಿ ಸರ್ಕಾರ ಬದಲಾಗಲಿದೆ ಎಂದು ಹೇಳಿದ್ದಾರೆ, ೪೮ ರಷ್ಟು ಜನರು ಪ್ರಸ್ತುತ ಸರ್ಕಾರ ಉಳಿಯುತ್ತದೆ ಎಂದು ಹೇಳಿದ್ದಾರೆ, ಆದರೆ ಶೇಕಡಾ ೯ ರಷ್ಟು ಜನರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ಎಎಪಿಯಿಂದ ಬಿಜೆಪಿಗೆ ಲಾಭ
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪ್ರಬಲ ಪೈಪೋಟಿ ನೀಡುವುದರಿಂದ ಕಾಂಗ್ರೆಸ್ ಪಕ್ಷದ ಮತಗಳನ್ನು ಎಎಪಿ ತನ್ನದಾಗಿಸಿಕೊಳ್ಳುವುದರಿಂದ ಅದು ಬಿಜೆಪಿಗೆ ವರದಾನವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.