
ತೆಹ್ರಿ,ಅ.೨೨-ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಪ್ರವಾಹ ಸದ್ಯಕ್ಕೆ ವಿರಾಮ ಪಡೆಯುವ ಸಾಧ್ಯತೆ ಕಾಣುತ್ತಿಲ್ಲ. ಇಂದಿನಿಂದ ಮೂರು ದಿನಗಳ ಕಾಲ ಈ ಎರಡು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.
ಹಠಾತ್ ಪ್ರವಾಹವು ಚಂಬಾ ಮತ್ತು ಮಂಡಿ ಜಿಲ್ಲೆಗಳ ಜಲಾನಯನ ಪ್ರದೇಶಗಳನ್ನು ಮುಳುಗಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ಭಾರೀ ಮಳೆಯೊಂದಿಗೆ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ನದಿ, ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಲಿದ್ದು, ಬೆಳೆ, ತೋಟಗಳಿಗೆ ಭಾರಿ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಉತ್ತರಾಖಂಡದ ತೆಹ್ರಿ ಜಿಲ್ಲೆಯ ಚಂಬಾ ಎಂಬಲ್ಲಿ ನಿನ್ನೆ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ಕು ತಿಂಗಳ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಭೂಕುಸಿತದಿಂದಾಗಿ ತೆಹ್ರಿ-ಚಂಬಾ ಮೋಟಾರ್ ರಸ್ತೆ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಭಾರೀ ಮಳೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.