ಹಿಟ್ ಅಂಡ್ ರನ್ ಜಾಯಮಾನ ನನ್ನದಲ್ಲ

ಕೈಗೆ ಎಚ್‌ಡಿಕೆ ಟಾಂಗ್
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೫:ನಾನು ಹಿಟ್ ಅಂಡ್ ರನ್ ಜಾಯಮಾನದ ವ್ಯಕ್ತಿಯಲ್ಲ,ಕೆಲವೊಂದು ವಿಚಾರವನ್ನು ಪ್ರಸ್ತಾಪ ಮಾಡುವುದು ಹುಡುಗಾಟಕಲ್ಲ, ಹಿಟ್ ಅಂಡ್ ರನ್ ನಾನಲ್ಲ ಕಾಂಗ್ರೆಸ್ ಎಂದು ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವರ್ಗಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ಪೆನ್‌ಡ್ರೈವ್ ಬಿಡುಗಡೆ ಮಾಡುತ್ತೇನೆ.ಕ್ರಮ ತೆಗೆದುಕೊಳ್ಳುವ ಧಮ್ಮು ತಾಕತ್ತು ಇದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನದು ಹಿಟ್ ಅಂಡ್ ರನ್ ಎಂದಿದ್ದಾರೆ. ಹಿಟ್ ಅಂಡ್ ರನ್ ಕಾಂಗ್ರೆಸ್ ನಾಯಕರು ಹಿಂದೆ ೪೦ ಪರ್ಸೆಂಟ್,ಪೇಸಿಎಂ ಆರೋಪ ಮಾಡಿದ್ದರು. ಒಂದಕ್ಕಾದರೂ ದಾಖಲೆ ಬಿಡುಗಡೆ ಮಾಡಿದ್ದೀರಾ,ನಿಮ್ಮದೇ ಸರ್ಕಾರವಿದೆ ದಾಖಲೆ ಏಕೆ ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆ ಬಿಟ್ಟರೆ ಯಾವುದೇ ಅಭಿವೃದ್ಧಿ ಯೋಜನೆಯಾಗಿಲ್ಲ. ಟೋಪಿ ಹಾಕೋಕೆ ಒಂದು ಇತಿಮಿತಿ ಇದೆ. ಕಾಂಗ್ರೆಸ್‌ನವರು ಕಿವಿಗೆ ಹೂವು ಇಟ್ಟುಕೊಂಡು ಜನರ ಮೇಲೆ ಹೂವಿನ ಕುಂಡ ಇಟ್ಟಿದ್ದಾರೆ ಎಂದು ಹರಿಹಾಯ್ದರು. ವರ್ಗಾವಣೆ ವಿಚಾರ ಮಾತನಾಡುವುದಕ್ಕೆ ನನಗೆ ಅಸಹ್ಯವಾಗುತ್ತದೆ. ಅಷ್ಟರ ಮಟ್ಟಿಗೆ ವರ್ಗಾವಣೆ ದಂಧೆ ನಡೆದಿದೆ ಎಂದ ಅವರು, ಗೃಹ ಸಚಿವರು ನಾನು ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅದು ಸುಳ್ಳು, ಪೊಲೀಸ್ ಮತ್ತು ಬಿಡಿಎ ಅಧಿಕಾರಿಗಳ ವರ್ಗಾವಣೆಯಲ್ಲಿ ಏನೆಲ್ಲ ಆಯಿತು ಎಂದು ನನಗೆ ಗೊತ್ತಿದೆ. ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿಗಿಂತ ಹೆಚ್ಚು ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದರು.
ನೈಸ್ ಹಗರಣ ದೆಹಲಿಯಲ್ಲಿ ಬಿಡುಗಡೆ
ನೈಸ್ ಹಗರಣದ ದಾಖಲೆಯನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ. ರೈತನ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆಯಲಾಗಿದೆ.ಈ ದಾಖಲೆಯನ್ನು ಪ್ರಧಾನಿ ಮೋದಿ ಅವರಿಗೂ ಕೊಡುತ್ತೇನೆ ಎಂದರು. ನೈಸ್ ಹೆಸರಿನಲ್ಲಿ ನಡೆದಿರುವ ಅಕ್ರಮವನ್ನು ಬಯಲು ಮಾಡಿಯೇ ಮಾಡುತ್ತೇನೆ.ನನ್ನ ಹೋರಾಟ ನಿಲ್ಲುವುದಿಲ್ಲ ಎಂದರು.
ನಸ್ ಹಗರಣದ ಬಗ್ಗೆ ವರದಿ ನೀಡಿರುವ ಕಾಂಗ್ರೆಸ್ ಶಾಸಕ ಟಿ.ಬಿ ಜಯಚಂದ್ರ ಅವರಿಗೆ ರೈತರ ಹೆಸರಿನಲ್ಲಿ ಬೆದರಿಕೆ ಹಾಕಿದವರು ಯಾರು ಎಂದು ಪ್ರಶ್ನಿಸಿದ ಅವರು, ಯಾವುದೋ ಸ್ಥಾನಮಾನಕ್ಕೆ ಮೌನವಾಗಿರಬೇಡಿ ಜಯಚಂದ್ರರವರೇ ಯಾರು ಬೆದರಿಕೆ ಹಾಕಿದ್ದಾರೆ ಎಂಬುದನ್ನು ಹೇಳಿ, ಬಡ ರೈತರ ಭೂಮಿ ಉಳಿಸೋಕೆ ಪ್ರಾಮಾಣಿಕ ಕೆಲಸಮಾಡಿದ್ದೀರಿ, ಪಕ್ಷ ರಾಜಕೀಯ ಸ್ಥಾನಮಾನಕ್ಕಿಂತ ನಾಡಿನ ಜನತೆಯ ಬದುಕಿನ ಪ್ರಶ್ನೆಮುಖ್ಯ. ಕಾನೂನು ಬಾಹಿರ ಚಟುವಟಿಕೆಗಳಿಗೆ ಹೆದರಿ ಮೌನಕ್ಕೆ ಶರಣಾಗಿ ಇತಿಹಾಸದಲ್ಲಿ ಉಳಿಯಬೇಡಿ ಎಂದು ಜಯಚಂದ್ರ ಅವರಿಗೆ ಕುಮಾರಸ್ವಾಮಿ ಸಲಹೆ ಮಾಡಿದರು.
ಜೆಡಿಎಸ್ ಜತೆ ಸೇರುವ ದಾರಿದ್ರ ಬಿಜೆಪಿಗೆ ಬಂದಿಲ್ಲ ಎಂಬ ಮಾಜಿ ಸಚಿವ ಸುನಿಲ್‌ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್‌ನ್ನು ದುರ್ಬಲ ಮಾಡಿಕೊಂಡಿವೆ. ನಮ್ಮ ಪಕ್ಷ ಏಕಾಂಗಿಯಾಗಿಯೇ ಹೋರಾಟ ಮಾಡುತ್ತದೆ. ಕರ್ನಾಟಕದ ದುಃಸ್ಥಿತಿಗೆ ಬಿಜೆಪಿ ಕಾಂಗ್ರೆಸ್‌ನದ್ದು ಇಬ್ಬರದ್ದು ಸಮಪಾಲು ಇದೆ ಎಂದರು.
ಕಾಂಗ್ರೆಸ್ ಪಕ್ಷ ರಾಜ್ಯವನ್ನು ದರೋಡೆ ಮಾಡುವುದು ನಿಶ್ಚಿತ,ಈಸ್ಟ್‌ಇಂಡಿಯಾ ಕಂಪನಿಯವರೇ ದೇಶವನ್ನು ದರೋಡೆ ಮಾಡಿ ಎಂದು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದಾರೆ. ೫೦ ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್, ದೇಶವನ್ನು ಯಾವ ಸ್ಥಿತಿಗೆ ತಂದಿದ್ದಾರೆಂದು ಗೊತ್ತಿದೆ. ಇವರು ಉತ್ತಮ ಆಡಳಿತ ನೀಡಿದ್ದರೆ ಹಸಿದಿರುವ ಜನಕ್ಕೆ ಅಕ್ಕಿ ವಿತರಿಸುವ ಪರಿಸ್ಥಿತಿ ಬರುತ್ತಿತ್ತೆ. ೫೦ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಜನ ಬಡವರಾಗಿಯೇ ಉಳಿದಿದ್ದಾರೆ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ವಿರುದ್ಧವೂ ವಾಗ್ದಾಳಿ ನಡೆಸಿ ಅವರ ಹೆಸರು ಹೇಳದೆ, ಬೆಂಗಳೂರು ಮಂತ್ರಿ ೭೧೦ಕೋಟಿ ಬಿಡುಗಡೆ ಮಾಡಿಲ್ಲ. ೨೦೧೯-೨೦ ಕಾಮಗಾರಿಗೆ ಶೇ. ೫, ೨೦೨೦-೨೧ಕ್ಕೆಶೇ. ೧೫ರಷ್ಟು ಕಮಿಷನ್ ಕೊಡಬೇಕು. ಅದು ಬ್ರಾಂಡ್ ಬೆಂಗಳೂರು ಸಲಹೆಗಾರರ ಮೂಲಕ ಹಣ ತಲುಪಿಸಬೇಕು. ಹಣ ತಲುಪಿದರೆ ಕಾಮಗಾರಿಹಣ ಬಿಡುಗಡೆ ಮಾಡುತ್ತಾರೆ ಎಂದು ಆರೋಪಿಸಿದರು.