ಹಿಜಾಬ್: ಕೈ-ಕಮಲ ಜಟಾಪಟಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಡಿ.೨೩:ಹಿಜಾಬ್ ನಿಷೇಧ ವಾಪಸ್ ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹೇಳಿಕೆ ರಾಜಕೀಯ ಕಿಚ್ಚಿಗೆ ಕಾರಣವಾಗಿದೆ. ಬಿಜೆಪಿ ನಾಯಕರುಗಳು ಹಿಜಾಬ್ ನಿಷೇಧ ವಾಪಸ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವನ್ನು ವಿಭಜಿಸಲು ಹೊರಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರೆ, ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡು ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಹಿಜಾಬ್ ಪರ-ವಿರೋಧ, ಸಂಘರ್ಷ ಆರಂಭವಾದಂತಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್, ಅಶೋಕ್, ಮಾಜಿ ಸಚಿವ. ಸಿ.ಟಿ ರವಿ, ಶಾಸಕ ಬನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರುಗಳು ಹಿಜಾಬ್ ನಿಷೇಧದ ಮುಖ್ಯಮಂತ್ರಿ ಹೇಳಿಕೆಗೆ ಕಿಡಿಕಾರಿ ಹಿಜಾಬ್ ನಿಷೇಧ ಪಾವಸ್ ಪಡೆದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರೆ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಿಜಾಬ್ ಈಗ ಮತ್ತೆ ಮುನ್ನೆಲೆಗೆ ಬಂದು, ಕೈ-ಕಮಲ ನಾಯಕರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.
ನವದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹಿಜಾಬ್ ನಿಷೇಧ ವಾಪಸ್ ತೀರ್ಮಾನ ಖಂಡನಾರ್ಹ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಧರ್ಮಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಯುವ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಹೊರಟಿದ್ದಾರೆ. ಸರ್ಕಾರದ ಒಡೆದಾಳುವ ನೀತಿಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಿನ್ನೆ ಹಿಜಾಬ್ ವಿಚಾರದಲ್ಲಿ ನೀಡಿರುವ ಹೇಳಿಕೆ ಬೇಜವಾಬ್ದಾರಿ ಹೇಳಿಕೆಯಾಗಿದೆ. ಮತ್ತೆ ಹಿಜಾಬ್‌ಗೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಕೈ ಹಾಕಿರುವುದು ಈ ನಾಡಿನ ದುರಾದೃಷ್ಟ ಎಂದು ಬಿ.ವೈ ವಿಜಯೇಂದ್ರ ಟೀಕಿಸಿದರು.ಯಾರೂ ಸಹ ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಬೇಕು ಎಂಬ ಬೇಡಿಕೆ ಇಟ್ಟಿರಲಿಲ್ಲ. ಶಾಲಾ ಮಕ್ಕಳಾಗಲಿ ವಿದ್ಯಾರ್ಥಿನಿಯರಾಗಲಿ ಯಾರೂ ಹಿಜಾಬ್ ನಿಷೇಧ ವಾಪಸ್ ಪಡೆಯಿರಿ ಎಂದು ಹೇಳಿರಲಿಲ್ಲ ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿರುವುದರ ಹಿಂದೆ ರಾಜಕೀಯ ಇದೆ. ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಯಾವಾಗ ಹಿನ್ನಡೆಯಾಗುತ್ತೋ ಆಗ ಈ ರೀತಿಯ ನಿರ್ಧಾರಗಳನ್ನು ಕೈಗೊಂಡು ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡೋದು ಕಾಂಗ್ರೆಸ್ ಉದ್ದೇಶ ಎಂದು ಆರೋಪ ಮಾಡಿ ಸಿದ್ದರಾಮಯ್ಯರವರು ಯಾವುದೋ ಒಂದು ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಅಲ್ಲ, ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ಹಾಗಾಗಿ ಜವಾಬ್ದಾರಿಯಿಂದ ಮಾತನಾಡಬೇಕು. ಬೇಜವಾಬ್ದಾರಿ ಹೇಳಿಕೆ ಸಲ್ಲದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಇಂತಹ ಹೇಳಿಕೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕನಿಷ್ಠ ಪಕ್ಷ ಶಾಲಾ-ಕಾಲೇಜುಗಳಿಗೂ ಹೋಗುವ ಮಕ್ಕಳನ್ನಾದರೂ ರಾಜಕೀಯದಿಂದ ದೂರ ಇಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕಿತ್ತು. ಆದರೆ, ಮುಖ್ಯಮಂತ್ರಿಗಳೇ ಸಮಾಜದಲ್ಲಿ ವಿಷ ಬೀಜ ಬಿತ್ತುವ ಒಡೆದಾಳುವ ನೀತಿಯನ್ನು ಮಾಡುತ್ತಿರುವುದು ದುರದೃಷ್ಕರ ಎಂದರು.ಶಾಲೆಗಳಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಾರಲು ಸಮವಸ್ತ್ರ ನೀತಿ ಸಂಹಿತೆಯನ್ನು ತರಲಾಗಿದೆ. ಇದನ್ನು ಸಿದ್ದರಾಮಯ್ಯರವರು ಅರ್ಥ ಮಾಡಿಕೊಳ್ಳಬೇಕು ಇದು ಮತ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸಲು ಹಿಜಾಬ್ ನಿಷೇಧ ವಾಪಸ್ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿದೆ. ಆದರೆ, ಪ್ರಧಾನಿ ಮೋದಿ ಅವರು ಅಲ್ಪಸಂಖ್ಯಾತ ಮಹಿಳೆಯರ ಹಿತವನ್ನು ಗಮನದಲ್ಲಿಟ್ಟುಕೊಂಡು ತ್ರಿವಳಿ ತಲಾಕ್‌ನ್ನು ನಿಷೇಧ ಮಾಡಿದರು. ಕಾಂಗ್ರೆಸ್‌ನವರು ಅಲ್ಪಸಂಖ್ಯಾತರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಬ್ರಿಟಿಷರ ಒಡೆದಾಳುವ ನೀತಿಯನ್ನು ಪರಂಪರೆ ಮುಂದುವರೆಸಿಕೊಂಡು ಬಂದಿದೆ. ಪಂಚರಾಜ್ಯ ಚುನಾವಣೆಗಳ ಫಲಿತಾಂಶ ದೇಶದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್‌ನ ಗ್ಯಾರಂಟಿಯನ್ನು ನಂಬುವುದಿಲ್ಲ. ಅದರ ಬದಲು ಮೋದಿ ಗ್ಯಾರೆಂಟಿಯನ್ನು ನಂಬುತ್ತಾರೆ ಎಂಬುದನ್ನು ಸಾಬೀತುಪಡಿಸಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷ ಹತಾಶೆಯಿಂದ ಸಮಾಜದ ಮಧ್ಯೆ, ಧರ್ಮಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದೆ ಎಂದು ಟೀಕಿಸಿದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ೫ ವರ್ಷ ಮುಖ್ಯಮಂತ್ರಿಯಾಗಿದ್ದಾಗ ಮತ್ತೆ ಅಧಿಕಾರ ಸಿಗುವುದು ಕಷ್ಟ ಎಂದು ತಿಳಿದಾಗ ಲಿಂಗಾಯತರು ಮತ್ತು ವೀರಶೈವರನ್ನು ಒಡೆದು ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಈಗ ಮತ್ತೆ ಧರ್ಮದಲ್ಲಿ ವಿಷಬೀಜ ಬಿತ್ತಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ, ಜನ ಇವರಿಗೆ ಪಾಠ ಕಲಿಸುತ್ತಾರೆ ಎಂದರು.ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರೀಕ್ಷೆ ಬರೆಯುವ ಹಿಂದೂ ಮಹಿಳೆಯರ ತಾಲಿ, ಕಾಲುಂಗುರವನ್ನು ತೆಗೆದಿರಿಸಿದ ಪ್ರಕರಣವೂ ನಡೆದಿತ್ತು ಎಂಬುದನ್ನು ನೆನಪು ಮಾಡಿದ ವಿಜೇಯೇಂದ್ರ ಅವರು ಕಾಂಗ್ರೆಸ್ ಸರ್ಕಾರ ಹಿಜಾಬ್ ವಿಚಾರ ಎಲ್ಲವನ್ನೂ ಬಿಟ್ಟು ಬರದಿಂದ ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸಲಿ ಎಂದು ಒತ್ತಾಯಿಸಿದರು.

ಸಿ.ಟಿ ರವಿ ಟೀಕೆ
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಏಕತೆ ಬೆಳೆಯಲಿ ಎಂಬ ಕಾರಣಕ್ಕೆ ಶಾಲೆಗಳಲ್ಲಿ ಮಾತ್ರ ಸಮವಸ್ತ್ರ ಕಡ್ಡಾಯಗೊಳಿಸಿ ಹಿಜಾಬ್ ನಿಷೇಧಿಸಲಾಗಿತ್ತು. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್‌ಗೆ ನಿಷೇಧ ಹೇರಿರಲಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ೧೯೬೪ ಶಿಕ್ಷಣ ಕಾಯ್ದೆ ಪ್ರಕಾರ ಸಮವಸ್ತ್ರ ಕಡ್ಡಾಯ ಮಾಡಲಾಗಿತ್ತು. ಈಗ ಮುಖ್ಯಮಂತ್ರಿಗಳು ಸಮವಸ್ತ್ರಕ್ಕೆ ಹಿಜಾಬ್ ಕಡ್ಡಾಯ ಮಾಡಲು ಹೊರಟಿದ್ದಾರೆ ಅಥವಾ ಅವರ ಇಷ್ಟದಂತೆ ಮಾಡಲು ಹೊರಟ್ಟಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಬೇಕು, ಬಡವ, ಬಲ್ಲಿದ, ಜಾತಿ, ತಾರತಮ್ಯ ಇರಬಾರದು, ಎಲ್ಲರೂ ಸಮಾನರು ಎಂಬ ಮಾನಸಿಕತೆಯನ್ನು ಕಲಿಯಬೇಕು ಎಂಬ ಉದ್ದೇಶದಿಂದ ಸಮವಸ್ತ್ರವನ್ನು ಶಾಲೆಗಳಲ್ಲಿ ಜಾರಿ ಮಾಡಲಾಗಿದೆ. ಶಾಲೆಗಳಲ್ಲೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಗುರುತು ಬರಬೇಕು ಆ ಗುರುತು ಇದ್ದರೆ ತಮಗೆ ಒಡೆದು ಆಳಲು ರಾಜಕಾರಣ ಮಾಡಲು ಸುಲಭ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾತನಾಡಿರಬಹುದು ಎಂದು ವ್ಯಂಗ್ಯವಾಡಿದರು. ನಾಳೆ ಕೆಲವರಿಗೆ ಕೇಸರಿ ಶಾಲು ಹಾಕಿಕೊಂಡು ಬರುವುದು ನಮ್ಮ ಐಡೆಂಟಿ ಅನಿಸಬಹುದು, ಕೆಲವರಿಗೆ ಹಸಿರು ಶಾಲು ನಮ್ಮ ಗುರುತು ಎಂದು ಅನಿಸಬಹುದು, ಇನ್ನೂ ಕೆಲವರಿಗೆ ನೀಲಿ ಶಾಲು ನಮ್ಮ ಗುರುತು ಅನಿಸಬಹುದು ಎಲ್ಲರೂ ಗುರುತು ತೋರಿಸಲು ಹೊರಟರೆ ಸಮಾನತೆ ಎಲ್ಲಿ ಬರುತ್ತೆ ಎಂದು ಸಿ.ಟಿ ರವಿ ಪ್ರಶ್ನಿಸಿದರು.

ಬಿಜೆಪಿ ಟೀಕೆ
ಸರ್ವಜನಾಂಗದ ಶಾಂತಿಯ ತೋಟದಲ್ಲಿ ಧರ್ಮದ ವಿಷಬೀಜ ಬಿತ್ತುವುದೇ ಮಜವಾಗಿ ಸಿದ್ದರಾಮಯ್ಯರವರ ಗ್ಯಾರೆಂಟಿ ಎಂದು ಬಿಜೆಪಿ ಟ್ವೀಟ್‌ನಲ್ಲಿ ಕಿಡಿಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳು ಸಮಾನತೆಯಿಂದ ಕೂಡಿರಬೇಕು ಎಂದು ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ. ಇದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ ಎಂದು ಬಿಜೆಪಿ ಎಕ್ಸ್‌ನಲ್ಲಿ ಹೇಳಿದೆ.

ಹಿಜಾಬ್ ನಿಷೇಧ ವಾಪಸ್ ಪಡೆಯುವ ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಅವರು ಹಿಜಾಬ್ ನಿಷೇಧದ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಸರಿಯಾಗಿ ನಡೆದುಕೊಂಡಿರಲಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಹಿಂದೂ ಧರ್ಮಕ್ಕೆ ನೀಡುವಷ್ಟು ಮಹತ್ವ್ವವನ್ನು ಮುಸ್ಲಿಂ ಧರ್ಮಕ್ಕೂ ನೀಡುತ್ತದೆ. ಹಿಂದೂ ಧರ್ಮದಲ್ಲಿ ಯಾರಿಗೂ ನೋವುಂಟು ಮಾಡಬಾರದು ಎಂದಿದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಿಜಾಬ್ ನಿಷೇಧ ವಾಪಸ್ ಹೇಳಿಕೆ ನೀಡಿದ್ದಾರೆ ಎಂದು ಬಾಗಲಕೋಟೆಯಲ್ಲಿ ತಿಮ್ಮಾಪುರ ಅವರು ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡರು

ಹಿಜಾಬ್ ನಿಷೇಧ ವಾಪಸ್ ಕುತಂತ್ರ: ಆರ್.ಅಶೋಕ್

ಹಿಜಾಬ್ ನಿಷೇಧ ವಾಪಸ್ ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹೇಳಿಕೆ ಹಿಂದೆ ದೊಡ್ಡ ಕುತಂತ್ರ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಹಿಜಾಬ್ ನಿಷೇಧ ವಾಪಸ್ ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಆರ್.ಅಶೋಕ್ ಹಿಜಾಬ್ ವಿಷಯ ಹಠಾತ್ತಾಗಿ ಮುನ್ನೆಲೆಗೆ ಬಂದಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ದೊಡ್ಡ ಕುತಂತ್ರ ಅಡಗಿದೆ. ಗ್ಯಾರಂಟಿ ಯೋಜನೆಗಳಿಂದ ಬರಿದಾದ ಖಜಾನೆ, ಅನುದಾನಕ್ಕಾಗಿ ಶಾಸಕರ ಒತ್ತಡ,ನಿಗಮ ಮಂಡಳಿ ನೇಮಕಕ್ಕೆ ಸೊಪ್ಪು ಹಾಕದ ಹೈಕಮಾಂಡ್, ಇವೆಲ್ಲದರಿಂದ ತಾವೇ ಸೃಷ್ಟಿಸಿಕೊಂಡ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿ ಜನರನ್ನು ದಿಕ್ಕು ತಪ್ಪಿಸಲು ಹೊರಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ಓದುವ ಮಕ್ಕಳಲ್ಲಿ ಸಮಾನತೆಯ ಭಾವನೆ ಮೂಡಿಸುವ ಸಮವಸ್ತ್ರ ಬಿಟ್ಟು ಧರ್ಮದ ಹೆಸರಿನಲ್ಲಿ ಎಳೆ ಮನಸ್ಸುಗಳನ್ನು ಒಡೆಯುವ ಹಿಜಾಬ್ ವಿಷಯವನ್ನು ಮತ್ತೆ ಮತ್ತೆ ಕೆಣಕುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಆರ್. ಅಶೋಕ್,ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕೀಯಕ್ಕೆ ಮೊರೆ ಹೋಗಿದೆ. ಕನ್ನಡಿಗರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬೆಳಗಾವಿಯಲ್ಲಿ ಮಹಿಳೆಯ ಬೆತ್ತಲೆ ಪ್ರಕರಣ, ಮಾಲೂರಿನ ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲಗುಂಡಿ ಸ್ವಚ್ಛಗೊಳಿಸುವ ಘಟನೆ ಸೇರಿದಂತೆ ಸಾಲು ಸಾಲೂ ವೈಫಲ್ಯ, ವಿವಾದ, ಒಳ ಜಗಳ ಮುಜುಗರದಿಂದ ಜನತೆಗೆ ಮುಖ ತೋರಿಸಲು ಆಗದಂತಹ ದುಃಸ್ಥಿತಿಗೆ ತಲುಪಿರುವ ಕಾಂಗ್ರೆಸ್ ಸರ್ಕಾರ ಈಗ ಹಿಜಾಬ್ ಮುಖವಾಡ ಹಾಕಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನ ನಡೆಸಿದೆ ಎಂದು ಅವರು ದೂರಿದ್ದಾರೆ.
ಹಿಜಾಬ್ ನಿಷೇಧ ವಾಪಸ್ ಪಡೆದರೆ ಹೋರಾಟ ನಡೆಸುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕರು ಹಾಗೂ ಹಿರಿಯ ನಾಯಕರ ಜತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದರು.