ಹಿಜಾಬ್‌ವಿರೋಧಿ ಪ್ರತಿಭಟನೆಯಲ್ಲಿ ಗುಂಡಿನ ದಾಳಿ: ಐವರು ಮೃತ್ಯು

ಟೆಹ್ರಾನ್, ಸೆ.೨೨- ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆ ಮತ್ತಷ್ಟು ಭೀಕರ ರೂಪ ತಳೆದಿದೆ. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸರಿಯಾಗಿ ಹಿಜಾಬ್ ಧರಿಸಿಲ್ಲವೆಂದು ಬಂಧಿತಳಾಗಿ ಬಳಿಕ ಠಾಣೆಯಲ್ಲೇ ಕೋಮಾಕ್ಕೆ ಜಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಹ್ಸಾ ಅಮಿನಿ ಎಂಬಾಕೆಯ ಸಾವು ಪ್ರಕರಣ ಸಂಬಂಧ ಆಕ್ರೋಶಗೊಂಡಿರುವ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು ೫೦೦ಕ್ಕೂ ಹೆಚ್ಚು ಮಂದಿ ಮಹಿಳೆಯರು ಕುರ್ದಿಸ್ತಾನ್‌ನಲ್ಲಿ ಪ್ರತಿಭಟನೆ ನಡೆಸುವ ವೇಲೆ ಕಾರುಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಅಲ್ಲದೆ ಕೆಲವರು ಕೂದಲು ಕತ್ತರಿಸಿಕೊಂಡು, ಹಿಜಾಬ್ ಸುಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ಭದ್ರತಾ ಸಿಬಂದಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಈವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೆಹ್ಸಾ ಸಾವು ಪ್ರಕರಣವನ್ನು ಯುರೋಪಿಯನ್ ಒಕ್ಕೂಟ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಖಂಡಿಸಿವೆ. ಅಲ್ಲದೆ ಅಧಿಕಾರಿಗಳು ದೇಶದ ಪ್ರಜೆಗಳ ಹಕ್ಕನ್ನು ಗೌರವಿಸುವುದರೊಂದಿಗೆ ಪ್ರಜೆಗಳ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿವೆ.