ಹಿಂಸೆಯಿಂದ ಏನನ್ನೂ ಸಾಧಿಸಲು ಸಾದ್ಯವಿಲ್ಲ:ಸವದಿ

ಬೆಂಗಳೂರು, ಏ. 14- ಬಸ್ಸುಗಳೆಂದರೆ ಸಾರಿಗೆ ವ್ಯವಸ್ಥೆಯ ಆತ್ಮಗಳಿದ್ದಂತೆ. ಬಸ್ಸುಗಳಿಂದಲೇ ಲಕ್ಷಾಂತರ ಸಾರಿಗೆ ನೌಕರರ ಬದುಕಿನ ರಥವೂ ಸಾಗುತ್ತದೆ ಎಂಬುದನ್ನು ನೌಕರರು ಅರ್ಥಮಾಡಿಕೊಳ್ಳಬೇಕು. ಹಿಂಸೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ

ಬಸ್ಸುಗಳಿಗೆ ಅಥವಾ ಬಸ್ ನಿಲ್ದಾಣಗಳಿಗೆ ಹಾನಿಗೊಳಿಸಿದರೆ ನೌಕರರು ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕಿ ಕೊಂಡಂತಾಗುತ್ತದೆ. ಇಂಥವರ ವಿರುದ್ಧ ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

ಈಗಾಗಲೇ ಅನೇಕ ನೌಕರ ಕುಟುಂಬದವರು ಮುಷ್ಕರದಿಂದ ಬೇಸತ್ತಿರುವದಾಗಿ ತಿಳಿಸಿದರೂ ಸಹ ಕೆಲವು ಪಟ್ಟಭದ್ರರು ಮುಷ್ಕರವನ್ನು ಮುಂದುವರಿಸುತ್ತಾ ಸಾರ್ವಜನಿಕರಿಗೆ ಅಷ್ಟೇ ಅಲ್ಲ ನೌಕರ ಬಾಂಧವರಿಗೂ ಕೂಡ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇಂಥವರ ಕುಮ್ಮಕ್ಕಿಗೆ ಬಲಿಯಾಗಬಾರದು ಎಂದು ಮತ್ತೊಮ್ಮೆ ನೌಕರ ವರ್ಗದವರಲ್ಲಿ ಮನವಿ ಮಾಡಿದ್ದಾರೆ

ಕರೆಗೆ ಓಗುಟ್ಟು ಹಲವಾರು ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಿರುವುದರಿಂದ ಹಲವು ಕಡೆಗಳಲ್ಲಿ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಯಿತು. ಇಂದು ಸಂಜೆಯ ವೇಳೆಗೆ 3200 ಗಿಂತಲೂ ಹೆಚ್ಚು ಬಸ್ಸುಗಳು ಸಂಚರಿಸಿವೆ ಎಂದರು

ಕರ್ತವ್ಯಕ್ಕೆ ಆಗಮಿಸಿದ ನಮ್ಮ ನೌಕರ ಮಿತ್ರರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು ಹಾಗೂ ಹಬ್ಬದ ಸಿಹಿಯನ್ನು ವಿತರಿಸಿ ಶುಭಾಶಯ ಕೋರಲಾಯಿತು ಎಂದು ತಿಳಿಸಿದ್ದಾರೆ

ಕುಟುಂಬದ ಸದಸ್ಯರಂತೆ ಇರುವ ನೌಕರ ಮಿತ್ರರ ಮೇಲೆ ನಾನು ವಿಶ್ವಾಸ ಕಳೆದುಕೊಂಡಿಲ್ಲ. ನಮ್ಮ ಸಾರಿಗೆ ನೌಕರ ಬಾಂಧವರು ವಾಸ್ತವ ಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಕೂಡಲೇ ಎಲ್ಲರೂ ಕೆಲಸಕ್ಕೆ ಹಾಜರಾಗುತ್ತಾರೆ ಎಂದು ನಾನು ಆಶಾವಾದಿಯಾಗಿದ್ದೇನೆ ಎಂದು ತಿಳಿಸಿದ್ದಾರೆ

60 ಬಸ್ಸುಗಳಿಗೆ ಹಾನಿ

ಮುಷ್ಕರ ನಿರತ ಸಾರಿಗೆ ನೌಕರರ ವಿಚಾರದಲ್ಲಿ ಸರ್ಕಾರ ಎಷ್ಟೇ ಸಮಾಧಾನ, ಸೌಹಾರ್ದದ ಕ್ರಮ ಅನುಸರಿಸುತ್ತಿದ್ದರೂ ಸಹ ಕಳೆದ 7 ದಿನಗಳಲ್ಲಿ ರಾಜ್ಯಾದ್ಯಂತ 60 ಸರ್ಕಾರಿ ಬಸ್ಸುಗಳ ಮೇಲೆ ದಾಳಿ ಮಾಡಿ ಹಾನಿಗೊಳಿಸಿದ್ದು ತೀರ ಖಂಡನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ

ಕೆ.ಎಸ್.ಆರ್.ಟಿ.ಸಿ.ಯ 34, ಬಿ.ಎಂ.ಟಿ.ಸಿ.ಯ 3, ಈಶಾನ್ಯ ಸಾರಿಗೆಯ 20 ಮತ್ತು ವಾಯುವ್ಯ ಸಾರಿಗೆಯ 3 ಬಸ್ಸುಗಳು ಸೇರಿದಂತೆ ಒಟ್ಟು ಅರವತ್ತು ಬಸ್ಸುಗಳು ಪ್ರತಿಭಟನಾಕಾರರ ದುಷ್ಕೃತ್ಯಕ್ಕೆ ಈಡಾಗಿ ಹಾನಿಗೊಂಡಿವೆ ಎಂದು ಹೇಳಿದ್ದಾರೆ

ಇದರಲ್ಲಿ ಕೆಲವೊಂದು ವೋಲ್ವೋದಂತಹ ದುಬಾರಿ ಬಸ್ಸುಗಳೂ ಸೇರಿವೆ. ಬಸ್ಸುಗಳಲ್ಲಿ ಹಾನಿಗೊಳಿಸಿದ ಈ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ