ಹಿಂಸಾಚಾರ ಮಾಜಿ ಮೇಯರ್ ಸಂಪತ್ ರಾಜ್ ಅಂದರ್

ಬೆಂಗಳೂರು,ನ.೧೭-ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ರನ್ನು ಬಂಧಿಸುವಲ್ಲಿ ಕೊನೆಗೂ ಕೇಂದ್ರ ಅಪರಾಧ
ವಿಭಾಗ(ಸಿಸಿಬಿ)ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊರೊನಾ ಸೋಂಕು ನೆಪಮಾಡಿ ಕಳೆದ ಅ.೧೪ರಿಂದ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಅ.೨೩ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಸಂಪತ್ ರಾಜ್ ರನ್ನು ನಿನ್ನೆ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸಂಪತ್ ರಾಜ್‌ಗೆ ಆಶ್ರಯ ನೀಡಿದ್ದ ಆಪ್ತ ಗೆಳೆಯ ರಿಯಾಜುದ್ದೀನ್ ನಿನ್ನೆ ಬಂಧಿಸಿ ನಡೆಸಿದ ತೀವ್ರ ವಿಚಾರಣೆಯಲ್ಲಿ ಬಂದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ.
ಬೆನ್ಸನ್ ಟೌನ್ ಬಳಿಯ ತನ್ನ ಸ್ನೇಹಿತನ ನಿವಾಸಕ್ಕೆ ರಾತ್ರಿ ಬಂದಿದ್ದ ವೇಳೆ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಸಂಪತ್ ರಾಜ್‌ರನ್ನು ವಿಚಾರಣೆ ನಡೆಸಲಾಗಿದ್ದು ಇಂದು ಮಧ್ಯಾಹ್ನ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಮತ್ತೆ ವಶಕ್ಕೆ ನ್ಯಾಯಾಧೀಶರನ್ನು ಕೇಳಲಾಗುವುದು ಎಂದರು.
ಕೊರೊನಾದಿಂದ ಸೆ.೧೪ರಂದು ಮೊದಲ ಬಾರಿಗೆ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್ ಅ.೩ರಂದು ಡಿಸ್ಚಾರ್ಜ್ ಆಗಿ ಮರುದಿನ ಮತ್ತೆ
ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು ನಂತರ ಅ.೧೪ ರಂದು ಡಿಸ್ಚಾರ್ಜ್ ಆಗಿ ಜಾಮೀನು ಅರ್ಜಿ ಸಲ್ಲಿಸಿದ್ದರು
ಅ.೧೬ ರಂದು ಜಾಮೀನು ಅರ್ಜಿ ತಿರಸ್ಕೃತವಾದ ಕಾರಣ ಮತ್ತೆ ಆಸ್ಪತ್ರೆಗೆ ಅ.೧೭ರಂದು ದಾಖಲಾಗಿದ್ದರು
ಸಂಪತ್ ರಾಜ್ ಡಿಸ್ಚಾರ್ಜ್ ಬಗ್ಗೆ ಮಾಹಿತಿ ಕೋರಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು.
ಚಿಕಿತ್ಸೆ ಪಡೆಯುತ್ತಿದ್ದ ಸಂಪತ್ ರಾಜ್ ಅ.೨೩ರಂದು ಡಿಸ್ಚಾರ್ಜ್ ಆಗಿ ತಲೆಮರೆಸಿಕೊಂಡಿದ್ದು ಸಿಸಿಬಿಗೆ ಮಾಹಿತಿ ನೀಡದೇ ಡಿಸ್ಚಾರ್ಜ್ ಮಾಡಿದ ಆಸ್ಪತ್ರೆಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು.
ಪ್ರಕರಣದ ಸಂಬಂಧ ಸಂಪತ್ ರಾಜ್, ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಓಕಾ ಅವರ ವಿಭಾಗೀಯ ಪೀಠ ಜಾಮೀನು ಅರ್ಜಿ ತಿರಸ್ಕರಿಸಿತ್ತು.
ಅಲ್ಲದೆ ಪ್ರಕರಣದ ಸಂಬಂಧ ಸಿಸಿಬಿ ತನಿಖಾಧಿಕಾರಿಗಳನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇದರಿಂದ ತನಿಖೆಯ ವೇಗ ಹೆಚ್ಚಿಸಿದ ಸಿಸಿಬಿ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು.
ತಮಿಳುನಾಡು, ಕೇರಳ ಹಾಗೂ ರಾಜ್ಯದ ಹಲವು ಭಾಗಗಳಲ್ಲಿ ಅಲೆದಾಡುತ್ತಿದ್ದ ಸಂಪತ್ ರಾಜ್ ಒಂದು ಕಡೆ ಎರಡು ದಿನಕ್ಕಿಂತ ಹೆಚ್ಚು ಎಲ್ಲಿಯೂ ಉಳಿಯುತ್ತಿರಲಿಲ್ಲ. ಇದರಿಂದ ಸಿಸಿಬಿ ಅಧಿಕಾರಿಗಳಿಗೆ ಬಂಧಿಸಲು ಸಾಧ್ಯವಾಗಿರಲಿಲ್ಲ.
ಬೆನ್ಸನ್ ಟೌನ್ ಬಳಿಯ ತನ್ನ ಸ್ನೇಹಿತನ ನಿನ್ನೆ ನಿವಾಸಕ್ಕೆ ಬಂದಿದ್ದ ವೇಳೆ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಮುಖ ಆರೋಪಿ ಸೆರೆ

ಸಿಸಿಬಿಗೆ ಸಿಕ್ಕಿಬಿದ್ದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್

ನಾಗರಹೊಳೆಯ ಫಾರಂಹೌಸ್ ನಲ್ಲಿ ಅಶ್ರಯ ಪಡೆದು ರಾತ್ರಿ ನಗರಕ್ಕೆ ಬಂದಾಗ ಸೆರೆ

ಆಸ್ಪತ್ರೆಯಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಸಂಪತ್ ರಾಜ್

ಆಶ್ರಯ ನೀಡಿದ್ದ ಆರೋಪಿ ನೀಡಿದ ಮಾಹಿತಿ ಆಧರಿಸಿ ಸೆರೆ

ಸ್ನೇಹಿತ ಸೆರೆ
ಕೆಜಿಹಳ್ಳಿ ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಮಾಜಿ ಕಾರ್ಪೊರೇಟರ್ ಜಾಕೀರ್‌ಗೆ ಆಶ್ರಯ ನೀಡಿದ್ದ ಆರೋಪಿ ರಿಯಾಜುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಂಪತ್ ರಾಜ್ ಹಾಗೂ ಜಾಕೀರ್ ತಲೆಮರೆಸಿಕೊಳ್ಳಲು ನೆರವು ನೀಡಿರುವುದನ್ನು ಆರೋಪಿ ರಿಯಾಜುದ್ದೀನ್ ಒಪ್ಪಿಕೊಂಡಿದ್ದಾನೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಯನ್ನು ನಾಗರಹೊಳೆ ಫಾರ್ಮ್ ಹೌಸ್‌ನಲ್ಲಿ ಬಂಧಿಸಿದ್ದೇವೆ ಆತ ವಿಚಾರಣೆ ವೇಳೆ ನೀಡಿದ ಸುಳಿವು ಆಧರಿಸಿ ಸಂಪತ್ ರಾಜ್ ನನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಹಾಗೂ ಜಾಕೀರ್ ಪಾತ್ರವಿರುವುದು ಅತ್ಯಂತ ಸ್ಪಷ್ಟವಾಗಿದೆ ಎಂದರು.