
ಟೆಲ್ ಅವೀವ್ (ಇಸ್ರೇಲ್), ಫೆ.೨೭- ಕಳೆದ ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಹಿಂಸಾಚಾರ ಸದ್ಯದಲ್ಲೇ ಅಂತ್ಯಕಾಣುವ ಲಕ್ಷಣ ಗೋಚರಿಸಿದೆ. ಹಿಂಸಾಚಾರದ ಉಲ್ಬಣವನ್ನು ಅಂತ್ಯಗೊಳಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ಇಸ್ರೇಲಿ ಸರ್ಕಾರ ಮತ್ತು ಪ್ಯಾಲೇಸ್ಟಿನಿಯನ್ ಪ್ರಾಧಿಕಾರವು ಜಂಟಿಯಾಗಿ ಬದ್ಧತೆ ಕ್ರಮಗಳನ್ನು ಘೋಷಿಸಿವೆ. ಇದೊಂದು ವಿರಳಾತೀವಿರಳ ಬೆಳವಣಿಗೆಯಾಗಿದ್ದು, ಶಾಂತಿಪ್ರಿಯ ನಾಗರಿಕರಲ್ಲಿ ಸಂತಸ ತಂದಿದೆ ಎನ್ನಲಾಗಿದೆ.
ಜೋರ್ಡಾನ್‌ನಲ್ಲಿ ನಡೆದ ಈ ಅಪರೂಪದ ಸಭೆಯಲ್ಲಿ ಈ ನಿರ್ಣಯ ಹೊರಬಿದ್ದಿದೆ. ಮಹತ್ವಪೂರ್ಣ ಸಭೆಯಲ್ಲಿ ಅಮೆರಿಕಾ ಮತ್ತು ಈಜಿಪ್ಟ್ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. ಸಭೆಯಲ್ಲಿ ಪರಸ್ಪರ ವಿಶ್ವಾಸ-ನಿರ್ಮಾಣ ಕ್ರಮಗಳನ್ನು ಬೆಂಬಲಿಸಲು ಮತ್ತು ನ್ಯಾಯ ಮತ್ತು ಶಾಶ್ವತ ಶಾಂತಿಗಾಗಿ ಕೆಲಸ ಮಾಡಲು ಎರಡೂ ಕಡೆಗಳಿಂದಲೂ ಒಪ್ಪಿಗೆ ಸೂಚಿಸಲಾಗಿದೆ ಎನ್ನಲಾಗಿದೆ. ಆದರೆ ಒಂದೆಡೆ ಈ ಶಾಂತಿಸಭೆ ನಡೆಯುತ್ತಿದ್ದರೆ ಮತ್ತೊಂದೆಡೆ ವೆಸ್ಟ್ ಬ್ಯಾಂಕ್‌ನಲ್ಲಿ ಪ್ಯಾಲೆಸ್ತೀನ್ ಬಂದೂಕುಧಾರಿಯೊಬ್ಬ ಇಬ್ಬರು ಇಸ್ರೇಲ್ ಸೈನಿಕರನ್ನು ಗುಂಡಿಕ್ಕಿ ಕೊಂದು ಹಾಕಿದ್ದಾನೆ. ಇಸ್ರೇಲಿ ಮಿಲಿಟರಿಯು, ದಾಳಿ ನಡೆಸಿದ ಬಂದೂಕುಧಾರಿಯನ್ನು ಹಿಂಬಾಲಿಸುತ್ತಿದ್ದು, ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದೆ. ಸದ್ಯ ಪ್ರದೇಶದಲ್ಲಿ ಎರಡು ಹೆಚ್ಚುವರಿ ಬೆಟಾಲಿಯನ್‌ಗಳನ್ನು ನಿಯೋಜಿಸಿದೆ. ಮೃತಪಟ್ಟ ಯೋಧರಲ್ಲಿ ಓರ್ವ ನಬ್ಲಸ್ ಬಳಿಯ ಹವಾರಾ ಗ್ರಾಮಕ್ಕೆ ಸೇರಿದವ ಎಂಬುದು ದೃಢಪಟ್ಟಿದೆ. ಇನ್ನು ಇಸ್ರೇಲ್ ಸರ್ಕಾರವು ಹವಾರದಲ್ಲಿ ನಡೆದ ಹತ್ಯೆಗಳನ್ನು “ಪ್ಯಾಲೆಸ್ತೀನ್ ಭಯೋತ್ಪಾದಕ ದಾಳಿ” ಎಂದು ಘೋಷಿಸಿದೆ. ಇನ್ನು ಭಾನುವಾರದ ಗುಂಡಿನ ದಾಳಿ ನಡೆದ ಗಂಟೆಗಳ ನಂತರ, ವಸಾಹತುಗಾರರ ದೊಡ್ಡ ಗುಂಪು ಅದೇ ಗ್ರಾಮಕ್ಕೆ ಪ್ರವೇಶಿಸಿ, ಕಲ್ಲುಗಳನ್ನು ಎಸೆಯಲು ಮತ್ತು ಮರ ಮತ್ತು ಕಾರ್‌ಗಳಿಗೆ ಬೆಂಕಿ ಕೊಡಲು ಆರಂಭಿಸಿತು.
ಪ್ಯಾಲೇಸ್ಟಿನಿಯನ್ ಮೂಲಗಳ ಪ್ರಕಾರ ಕನಿಷ್ಠ ೧೫ ಮನೆಗಳು ಮತ್ತು ಹಲವಾರು ಕಾರುಗಳು ಹಿಂಸಾಚಾರದಲ್ಲಿ ಸುಟ್ಟುಹೋಗಿವೆ. ಹಲವಾರು ಕುಟುಂಬಗಳನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಬೇಕಾಯಿತು ಎನ್ನಲಾಗಿದೆ.
ಇದೇ ಸಮಯದಲ್ಲಿ ಮತ್ತೊಂದೆಡೆ ಇಸ್ರೇಲ್ ಸರ್ಕಾರ ಹಾಗೂ ಪ್ಯಾಲೆಸ್ತೀನ್ ನಡುವೆ ಶಾಂತಿಸಭೆ ನಡೆದಿದೆ.