ಹಿಂದೂ ರಾಷ್ಟ್ರ ನಿರ್ಮಾಣದಿಂದ ಭಾರತದ ಜಾತ್ಯಾತೀತ ವ್ಯವಸ್ಥೆಗೆ ಧಕ್ಕೆ: ಭಂತೆ ಮಹಾಥೇರೋ ಕರುಣಾಕರ್ ಎಚ್ಚರಿಕೆ

ಕಲಬುರಗಿ,ಅ.15: ಹಿಂದೂ ರಾಷ್ಟ್ರ ನಿರ್ಮಾಣವು ಭಾರತ ದೇಶದ ಸಮಗ್ರತೆಗೆ, ಭಾವೈಕ್ಯತೆಗೆ ಹಾಗೂ ಅಭಿವೃದ್ಧಿಗೆ ಮಾರಕವಾಗಲಿದೆ. ಆದ್ದರಿಂದ ಎಲ್ಲರೂ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಯಾವುದೇ ರೀತಿಯಲ್ಲಿ ಅವಕಾಶ ಕೊಡದೇ ಶಾಂತಿ, ಸಮಾನತೆಯನ್ನು ಬೋಧಿಸುವ ಬೌದ್ಧ ಧರ್ಮದ ದೀಕ್ಷೆಯನ್ನು ಪಡೆಯಬೇಕು ಎಂದು ನವದೆಹಲಿಯ ಮಹಾಥೇರೋ ಕರುಣಾಕರ್ ಅವರು ಕರೆ ನೀಡಿದರು.
ನಗರದ ಎಂಎಸ್‍ಕೆ ಮಿಲ್ ಪ್ರದೇಶದಲ್ಲಿ ಹಮ್ಮಿಕೊಂಡ ವಿಭಾಗ ಮಟ್ಟದ 68ನೇ ಬೌದ್ಧ ಧರ್ಮ ದೀಕ್ಷಾ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ. ಅಸ್ಪøಶ್ಯತೆ ಇದೆ. ಮೂಢನಂಬಿಕೆ ಮತ್ತು ಕಂದಾಚಾರಗಳು ಇವೆ. ಮಹಿಳೆಯರು ಹಾಗೂ ಪುರುಷರಿಗೆ ಬೇಧಭಾವ ಮಾಡಲಾಗುತ್ತಿದೆ. ಹೀಗಾಗಿ ಹಿಂದೂ ಧರ್ಮದಿಂದ ಜಾತ್ಯಾತೀತ ರಾಷ್ಟ್ರಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ಎಚ್ಚರಿಸಿದರು.
ಶತಶತಮಾನಗಳಿಂದ ಪರಿಶಿಷ್ಟರು ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ವರ್ಣಾಶ್ರಮ ಪದ್ದತಿಯಿಂದಾಗಿ ಶ್ರೇಣಿಕೃತ ಜಾತಿ ವ್ಯವಸ್ಥೆಯಿಂದಾಗಿ ಬ್ರಾಹ್ಮಣತ್ವದ ನೇತೃತ್ವದಲ್ಲಿ ಮತ್ತೆ ಮನುವಾದವನ್ನು ಜಾರಿಗೆ ತರಲು ಹಿಂದೂರಾಷ್ಟ್ರ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹಿಂದೂ ಧರ್ಮದಲ್ಲಿನ ಅಸಮಾನತೆ, ಅಸ್ಪøಶ್ಯತೆ ಹಾಗೂ ಮೂಢನಂಬಿಕೆ, ಕಂದಾಚಾರಗಳಿಗೆ ಬೇಸತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸೇರಿದರು. ಹಿಂದೂವಾಗಿ ಹುಟ್ಟಿರುವೆ. ಹಿಂದೂವಾಗಿ ಸಾಯಲಾರೆ ಎಂದರು. ಅವರ ತತ್ವ, ಆಚಾರ, ವಿಚಾರಗಳು ಹಾಗೂ ಜೀವನ ಶೈಲಿಯನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ಕರೆ ನೀಡಿದರು.
ಇಡೀ ಜಗತ್ತಿನಲ್ಲಿಯೇ ಭಾರತವು ಜಾತ್ಯಾತೀತ ಪ್ರಬಲ ರಾಷ್ಟ್ರವಾಗಿದೆ. ಯಾವುದೇ ಒಂದು ಸಣ್ಣ ಗ್ರಾಮಕ್ಕೆ ಹೋಗಿ, ಪಟ್ಟಣಕ್ಕೆ ಹೋಗಿ, ನಗರಕ್ಕೆ ಹೋಗಿ, ಯಾವುದೇ ಒಂದು ಸ್ಥಳದಲ್ಲಿ ಒಂದೇ ಧರ್ಮದಲ್ಲಿ ಇರುವುದು ಎಲ್ಲಿಯೂ ಕಾಣಸಿಗುವುದಿಲ್ಲ. ಪ್ರತಿಯೊಂದು ಸ್ಥಳದಲ್ಲಿ ಬ್ರಾಹ್ಮಣ, ವೀರಶೈವರು, ಅಲ್ಪಸಂಖ್ಯಾತರು, ಕ್ರೈಸ್ತರು, ಜೈನರು, ಸಿಖ್ಖರು ಮುಂತಾದ ಧರ್ಮಿಯರು ವಾಸಿಸುತ್ತಾರೆ. ಅವರೆಲ್ಲರನ್ನೂ ಹಿಂದೂಗಳನ್ನಾಗಿ ಮಾಡುವುದು ಅಸಾಧ್ಯದ ಮಾತು. ಪ್ರತಿಯೊಂದು ಧರ್ಮಕ್ಕೂ ತಮ್ಮದೇ ಆದ ಆಚಾರ, ವಿಚಾರ ಇರುತ್ತವೆ. ಅದರಲ್ಲಿಯೂ ಹಿಂದೂ ಧರ್ಮದಲ್ಲಿನ ಅಸಮಾನತೆ, ಅಸ್ಪøಶ್ಯತೆಯು ದುಡಿಯುವ ವರ್ಗಕ್ಕೆ ಹಾಗೂ ಶೋಷಿತರಿಗೆ ಅನ್ಯಾಯ ಮಾಡುತ್ತಿದೆ. ದೌರ್ಜನ್ಯ ಹೆಚ್ಚಾಗುತ್ತಿವೆ. ಹಾಗಾಗಿ ಸಮಾನತೆಯನ್ನು ಬೋಧಿಸುವ, ಶಾಂತಿಯನ್ನು ಬಯಸುವ ಬೌದ್ಧ ಧರ್ಮವನ್ನು ಸ್ವೀಕರಿಸಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು. ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದರು. ಯಾರೂ ಹುಟ್ಟಿನಿಂದ ಶ್ರೇಷ್ಠರು ಹಾಗೂ ನಿಷ್ಕøಷ್ಠರು ಅಲ್ಲ ಎಂದು ಹೇಳಿದ ಅವರು, ಹಿಂದೂ ರಾಷ್ಟ್ರದ ಕುರಿತು ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಧೀರೇಂದ್ರ ಸ್ವಾಮೀಜಿ ಮುಂತಾದವರು ಒಂದು ಚಿಕ್ಕ ಗ್ರಾಮವನ್ನು ಹಿಂದೂ ಗ್ರಾಮವನ್ನಾಗಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಪ್ರಧಾನಿಯವರು ಹಿಂದೂತ್ವಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಇದಲ್ಲದೇ ಸರ್ಕಾರಿ ಸ್ವಾಮ್ಯದ ಸ್ವತ್ತುಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಹೀಗಾಗಿ ಮತ್ತೆ ಮನುವಾದವನ್ನು ಜಾರಿಗೆ ತರುವ ಹುನ್ನಾರ ಅಡಗಿದೆ. ಹಾಗಾಗಿ ಹಿಂದೂ ರಾಷ್ಟ್ರ ನಿರ್ಮಾಣವನ್ನು ಎಲ್ಲರೂ ವಿರೋಧಿಸಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ಪ್ರೊ. ಹರಿರಾಮ್ ಅವರು ಮುಖ್ಯ ಭಾಷಣ ಮಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮದಿಂದಲೇ ಭಾರತದ ಅಭಿವೃದ್ಧಿ ಹಾಗೂ ಸಮಾನತೆ ಸಾಧ್ಯ ಎಂಬುದನ್ನು ಮನಗಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಸಂವಿಧಾನವನ್ನೂ ರಚಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಬೌದ್ಧ ಧರ್ಮದಲ್ಲಿ ಸಮಾನತೆಯ ಹಕ್ಕುಗಳು ಇವೆ ಎಂದರು.
ಬೌದ್ಧ ಧರ್ಮ ಕೇವಲ ಭಾರತಕ್ಕೆ ಅಷ್ಟೇ ಅಲ್ಲ, ಇಡೀ ಜಗತ್ತಿಗೆ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು. ಭಂತೆ ಸಂಘಾನಂದ್, ಭಂತೆ ರೇವತ್, ಭಂತೆ ಜ್ಞಾನಸಾಗರ್, ಭಂತೆ ವರಜ್ಯೋತಿ, ಭಂತೆ ಧಮ್ಮ, ಭಂತೆ ಬೋಧಿಧಮ್ಮ ಅವರು ಮಾತನಾಡಿದರು.
ಇದಕ್ಕೂ ಮುನ್ನ ಬಿಎಸ್‍ಐ ಟ್ರಸ್ಟಿ ಚೇರಮನ್ ಸುಭಾಷ್ ಜುಂಜಾಲೆ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಭಾರತದ ಸಂವಿಧಾನವು ಅತ್ಯಂತ ಪವಿತ್ರವಾಗಿದೆ. ಅದರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಅಲ್ಲದೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸಬೇಕು. ಕೇವಲ ಹೆಸರಿಗೆ ಮಾತ್ರ ಧಮ್ಮ ಧೀಕ್ಷೆ ಪಡೆದರೆ ಸಾಲದು. ಬೌದ್ಧ ಧಮ್ಮವನ್ನು ತಮ್ಮ ಜೀವನದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು. ವೈಚಾರಿಕ ಹಾಗೂ ವೈಜ್ಞಾನಿಕ ನೆಲಗಟ್ಟಿನ ಮೇಲೆ ಬದುಕಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಲಕ್ಷ್ಮಣ್ ಎಸ್. ಸೋನಕಾಂಬಳೆ ಅವರು ವಹಿಸಿದ್ದರು. ಟ್ರಸ್ಟಿಗಳಾದ ಸೂರ್ಯಕಾಂತ್ ನಿಂಬಾಳಕರ್, ಅಂಬರ್ ಸಾರೆ, ನರಸಿಂಹ ಭಂಡಾರ್, ಸಮತಾ ಸುದರ್ಶನ್, ಸುರೇಶ್ ಕಾನೇಕರ್, ರಮೇಶ್ ಪಟ್ಟೇದಾರ್, ಸುನೀಲ್ ಮಾನ್ಪಡೆ, ಜೆ.ಎಸ್. ಕಲ್ಯಾಣಿ, ವೈಜನಾಥ್ ಸೂರ್ಯವಂಶಿ, ಮರೆಪ್ಪ ಬುಕ್ಕಲ್, ರಣಧೀರ್ ಹೊಸಮನಿ, ಮಾಯಾ ಸುಗೂರ್, ಅಮರಪಾಲಿ ವರವಟ್ಟಿ, ಡಾ. ಅನಿಲ್ ಟೆಂಗಳಿ, ಅಲ್ಲಮಪ್ರಭು ನಿಂಬರ್ಗಾ, ಮಹೇಶ್ ಸಂಗಾಔಇ, ಶರಣು ದೊಡ್ಡಮನಿ, ಡಾ. ಪ್ರಕಾಶ್ ಹಾಗರಗಿ, ಸಂದೀಪ್ ಹೋಳಕರ್ ಮುಂತಾದವರು ಪಾಲ್ಗೊಂಡಿದ್ದರು. ಆರಂಭದಲ್ಲಿ ಡಾ. ನಿಜಲಿಂಗ್ ದೊಡ್ಡಮನಿ ಅವರು ಸ್ವಾಗತಿಸಿದರು. ರಮಾ ಅವರು ವಂದಿಸಿದರು. ಜಾನಕಿ ಅವರು ಕಾರ್ಯಕ್ರಮ ನಿರೂಪಿಸಿದರು.