‘ಹಿಂದೂ ಮಹಾಸಭಾ ಸಂಘಟನೆ ನಿಷೇಧಿಸಿ’

ಪುತ್ತೂರು, ಸೆ.೨೪- ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ್ದು ನಾವೇ ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವ ಹಿಂದೂ ಮಹಾಸಭಾದ ನಾಯಕರ ನಡೆ ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್ ಆಗ್ರಹಿಸಿದರು
ಅವರು ಎಸ್‌ಡಿಪಿಐ ಕುಂಬ್ರ ಬ್ಲಾಕ್ ಸಮಿತಿ ವತಿಯಿಂದ ಗುರುವಾರ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಜಂಕ್ಷನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಗಾಂಧಿ ಹತ್ಯೆಯನ್ನು ಬಹಿರಂಗವಾಗಿ ಒಪ್ಪಿಕೊಂಡು ರಾಜ್ಯದ ಮುಖ್ಯಮಂತ್ರಿಗೆ ಸವಾಲು ಎಸೆದ ಹಿಂದೂ ಮಹಾಸಭಾ ಸಂಘಟನೆಯು ದೇಶದ ಐಕ್ಯತೆ ಮತ್ತು ಸೌಹಾರ್ಧತೆಗೆ ಮಾರಕವಾಗಿದೆ. ಈ ಹಿನ್ನಲೆಯಲ್ಲಿ ಹಿಂದೂ ಮಹಾಸಭಾ ಸಂಘಟನೆಯನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು. ಎಸ್‌ಡಿಪಿಐ ಕುಂಬ್ರ ಬ್ಲಾಕ್ ಸಮಿತಿ ಅಧ್ಯಕ್ಷ ಕೆ.ಎಂ. ಶರೀಫ್, ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಮಾತನಾಡಿದರು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ನಗರ ಅಧ್ಯಕ್ಷ ಸಿರಾಜ್ ಎ.ಕೆ, ಪಿಎಫ್‌ಐ ಕುಂಬ್ರ ವಲಯ ಅಧ್ಯಕ್ಷ ಎಂ. ಶಾಕಿರ್ ಕಟ್ಟತ್ತಾರು, ಮುಖಂಡರಾದ ಪಿಬಿಕೆ ಮಹಮ್ಮದ್, ಸಿರಾಜುದ್ದೀನ್ ಇಸಾಕ್ ಅರಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.