ಹಿಂದೂ ಪರ ಕಾರ್ಯಕರ್ತರು ಜಾಗೃತರಾಗಬೇಕು: ಶ್ರೀರಾಮುಲು

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.13:- ಸರ್ಕಾರ ಬಂದು ಕೇವಲ ಎರಡು ತಿಂಗಳು ಕಳೆದಿಲ್ಲ.ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ನಡೆಯುತ್ತಿದೆ.ಸರ್ಕಾರ ಕೊಲೆಗಡುಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಮೃಧುದೋರಣೆ ತಳೆಯುತ್ತಿದೆ.ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದ ಕಾರಣ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅತ್ಯಂತ ಜಾಗ್ರತೆಯಿಂದ ಇರಬೇಕು ಎಂದು ಮಾಜಿ ಸಚಿವ ಶ್ರೀರಾಮಲು ಸಲಹೆ ನೀಡಿದರು.
ತಿ.ನರಸೀಪುರ ಪಟ್ಟಣದಲ್ಲಿ ಮೊನ್ನೆ ಹತ್ಯೆಯಾದ ವೇಣುಗೋಪಾಲ್ ಮನೆಗೆ ಭೇಟಿ ನೀಡಿ ಕುಟುಂಬದ ವರ್ಗಕ್ಕೆ ಸಾಂತ್ವನ ಹೇಳಿದ ನಂತರ ಮಾತನಾಡಿದರು.ವೇಣುಗೋಪಾಲ್ ಒಬ್ಬ ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಯುವಕ.ಅತನಿಗೆ ಯಾವುದೇ ವ್ಯವಹಾರದ ತಕರಾರು ಇರಲಿಲ್ಲ.ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡುವುದು ಸರಿಯಲ್ಲ. ವೇಣುಗೋಪಾಲ್ ಹತ್ಯೆಯಿಂದ ಅವರ ಮನೆಯಲ್ಲಿ ಅನಾಥಪ್ರಜ್ಞೆ ಕಾಡುತ್ತಿದೆ.ಯುವಕನ ಮನೆಗೆ ಆಗಿರುವ ನಷ್ಟವನ್ನು ತುಂಬುವವರು ಯಾರು.ಸರ್ಕಾರ ಪರಿಹಾರ ಕೊಡಬಹುದು,ಹಲವು ವ್ಯಕ್ತಿಗಳು ಧನ ಸಹಾಯ ಮಾಡಬಹುದು.ಆದರೆ,ಹತ್ಯೆಯಾದ ವ್ಯಕ್ತಿಯನ್ನು ತಂದು ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತಿದ್ದು,ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ.ಸರ್ಕಾರ ಬಂದ ಮೇಲೆ ಜೈನಮುನಿಗಳು ಸೇರಿದಂತೆ 16 ಹಿಂದೂ ಪರ ಸಂಘಟನೆಯ ವ್ಯಕ್ತಿಗಳ ದಾರುಣ ಹತ್ಯೆಯಾಗಿದೆ.ಸರಣಿ ಕೊಲೆಗಳು ನಡೆಯುತ್ತಿದ್ದರೂ ಯಾರ ಮೇಲೂ ಸರ್ಕಾರ ಕ್ರಮ ಜರುಗಿಸಿಲ್ಲ.ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.ಮುಖ್ಯಮಂತ್ರಿಗಳು ನರಸೀಪುರದಲ್ಲಿ ಹತ್ಯೆಯಾದ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯವೂ ತೋರಿಸಿಲ್ಲ.ಈಗಲಾದರೂ ಮುಖ್ಯಮಂತ್ರಿಗಳು ಕಣ್ಣು ತೆರೆದು ಇತ್ತ ನೋಡಬೇಕು.ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ಪರಿಹಾರ ಘೋಷಿಸಬೇಕು ಎಂದರು.
ಬಿಜೆಪಿ ಪಕ್ಷ ಹೆಣದ ಮೇಲೆ ರಾಜಕೀಯ ಮಾಡುತ್ತಿಲ್ಲ.ಇಲ್ಲಿಗೆ ರಾಜಕಾರಣ ಮಾಡಲು ನಾವು ಬಂದಿಲ್ಲ. ಸೂತಕದಲ್ಲಿರುವ ಮನೆಗೆ ಧೈರ್ಯ ತುಂಬಲು ಬಂದಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷದ ಯಾವ ಮುಖಂಡರು ಇತ್ತ ಕಡೆ ತಲೆ ಹಾಕದೆ ಇರುವುದು ನಾಚಿಕೆಗೇಡಿನ ಸಂಗತಿ.ಭಾರತ ಪ್ರಜಾಪ್ರಭುತ್ವ ದೇಶ.ಇಲ್ಲಿ ಅನ್ಯಾಯವನ್ನು ಖಂಡಿಸುವ ಹಕ್ಕು ಎಲ್ಲರಿಗೂ ಇದೆ.ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದರು.ವೇಣುಗೋಪಾಲ್ ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ.ಕಷ್ಟಪಟ್ಟು ಜೀವನ ನಡೆಸುತ್ತಿದ್ದ.ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಮಾಡಿದ ಎಂಬ ಒಂದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ.ಹಿಂದೂ ಕಾರ್ಯಕರ್ತರು ಒಬ್ಬಂಟಿ ಓಡಾಡುವುದನ್ನು ಬಿಡಬೇಕು.ಈ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲಹಾಗಾಗಿ ಕಾರ್ಯಕರ್ತರು ಜಾಗೃತವಾಗಿರಬೇಕು ಎಂದರು.
ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಮೈಸೂರು ಮಹಾನಗರ ಪಾಲಿಕೆಸದಸ್ಯ ಸತೀಶ್, ಡಾ.ರೇವಣ್ಣ, ತಾಲ್ಲೂಕು ಅಧ್ಯಕ್ಷ ಕೆ. ಸಿ. ಲೋಕೇಶ್, ಟೌನ್ ಅಧ್ಯಕ್ಷ ಕಿರಣ್, ತೋಟದಪ್ಪಬಸವರಾಜು, ಕೆಬ್ಬೆಹುಂಡಿ ಶಿವಕುಮಾರ್, ಕರೋಹಟ್ಟಿ ಬಸವರಾಜು,ರಂಗುನಾಯಕ, ವೆಂಕರಮಣಶೆಟ್ಟಿ, ತಾಪಂ ಮಾಜಿ ಸದಸ್ಯ ನಿಲಸೋಗೆ ಬಸವರಾಜು, ಮಾಜಿ ಪುರಸಭೆ ಸದಸ್ಯರಾದ ಲೋಕೇಶ್, ನಂಜುಂಡಸ್ವಾಮಿ, ಚಿಕ್ಕಮಹದೇವ, ಕೊತ್ತೇಗಾಲ ಕಿಟ್ಟಿ, ಚೌಹಳ್ಳಿಸಿದ್ದರಾಜು, ಭೈರಾಪುರ ಬಾಲು,ಕೆಂಡನಕೊಪ್ಪಲು ಕುಮಾರ್, ಯೂತ್ ಅಧ್ಯಕ್ಷ ಕುರುಬೂರು ಶಿವು, ಕರೋಹಟ್ಟಿ ಮಹಾದೇವಯ್ಯ, ಮುದ್ದುಕೃಷ್ಣ, ಮೂಗೂರು ಕುಮಾರಸ್ವಾಮಿ, ಮಹದೇವಸ್ವಾಮಿ, ಚಾಮನಾಯಕ, ಮೂಗೂರು ಜಯಣ್ಣ, ಭಾಗ್ಯಮ್ಮ ಇತರರು ಹಾಜರಿದ್ದರು.