ಹಿಂದೂ ಪದ: ಜಾರಕಿಹೊಳಿ ಹೇಳಿಕೆ ಬೆಂಬಲಿಸಿ ದಲಿತ ಸೇನೆ ಬೃಹತ್ ಪ್ರತಿಭಟನೆ

ಕಲಬುರಗಿ:ನ.19: ವೈಚಾರಿಕ ಚಿಂತಕ, ಮೂಢನಂಬಿಕೆ ವಿರೋಧಿ, ಚಳುವಳಿಯ ರೂವಾರಿ ಶಾಸಕ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಬೆಂಬಲಿಸಿ, ಹಿಂದೂ ಪದದ ವಿಶ್ಲೇಷಣೆ, ವಿಮರ್ಶೆಗೆ ಆಗ್ರಹಿಸಿ ಶನಿವಾರ ದಲಿತ ಸೇನೆಯ ಕಾರ್ಯಕರ್ತರು ನಗರದ ಜಗತ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಸುಮಾರು 1400 ವರ್ಷಗಳ ಹಿಂದೆ ಇಸ್ಲಾಂ ಭಾರತಕ್ಕೆ ಬರುವ ಮುಂಚೆ ಇಲ್ಲಿನ ಮುಸ್ಲಿಂರು ಶೂದ್ರರಾಗಿದ್ದರು. ಬ್ರಾಹ್ಮಣರ ದಬ್ಬಾಳಿಕೆಯಿಂದ ಶೂದ್ರರು ಮುಸ್ಲಿಂ ಧರ್ಮಕ್ಕೆ ಮತಾಂತರರಾದರು. 3000 ವರ್ಷಗಳ ಹಿಂದೆ ಆಶ್ರಯ ಹುಡುಕಿಕೊಂಡು ಭಾರತಕ್ಕೆ ಬಂದ ಆರ್ಯರು ತಮ್ಮ ಅನುಕೂಲಕ್ಕಾಗಿ ಇಲ್ಲಿನ ಮೂಲ ನಿವಾಸಿಗಳನ್ನು ವಿಘಟಿಸಿ ಬೇರೆ, ಬೇರೆ ಜಾತಿಗಳನ್ನಾಗಿ ಮಾಡಿ ತಮ್ಮ ಪ್ರಭುತ್ವ ಸಾಧಿಸಿದರು ಎಂದು ತಿಳಿಸಿದರು.
ಮೂಲ ನಿವಾಸಿಗಳನ್ನು ಗುರಿಯಾಗಿರಿಸಿಕೊಂಡು ನಾನಾ ತರಹದ ಕಟ್ಟುಪಾಡುಗಳನ್ನು ಜಾರಿಗೆ ತಂದು ಅವರ ಶೋಷಣೆಗೆ ನಿಂತಿದ್ದರ ಫಲವಾಗಿ ಭಾರತವನ್ನು ಆಕ್ರಮಿಸಿದ ಪಾರ್ಸಿಯನ್ನರು, ಪೋರ್ಚ್‍ಗೀಸರು, ಡಚ್ಚರು, ಇಲ್ಲಿನ ಜನರ ಮೇಲೆ ಆಕ್ರಮಣ ಮಾಡಿ ಅವರನ್ನು ಗುಲಾಮರನ್ನಾಗಿ ಮಾಡಿಕೊಂಡರು. ಪರ್ಸಿಯನ್ ಭಾಷೆಯಲ್ಲಿ ಹಿಂದೂ ಪದದ ಅರ್ಥ ಕಳ್ಳ. ಡಾಕು, ಹಾದಿ ದರೋಡೆಕೋರ, ಗಾಲಮ್ ಎಂದರ್ಥ. ಈ ಪದವನ್ನು ಇಲ್ಲಿನ ಬ್ರಾಹ್ಮಣರು ಸ್ವೀಕರಿಸಲಿಲ್ಲ ಎಂದು ಅವರು ದೂರಿದರು.
ತಮ್ಮನ್ನು ಹಿಂದುಗಳೆಂದು ಗುರುತಿಸಿಕೊಳ್ಳಲು ನಿರಾಕರಿಸಿ ಇತರ ಹಿಂದುಳಿದ ವರ್ಗದವರ ಮೇಲೆ ಹಿಂದು ಪದವನ್ನು ಹೇರಿ ತಾವು ದೂರ ಉಳಿದರು. ಈಗಲೂ ಕೂಡ ಬ್ರಾಹ್ಮಣರು ತಾವು ಹಿಂದುಗಳೆಂದು ಒಪ್ಪಿಕೊಳ್ಳುವುದಿಲ್ಲ. ವಿಶ್ವೇಶ್ವರ ತೀರ್ಥರು ಸುದ್ದಿವಾಹಿನಿಯೊಂದರಲ್ಲಿ ಚರ್ಚಿಸುವ ಸಂದರ್ಭದಲ್ಲಿ ಬ್ರಾಹ್ಮಣ ಧರ್ಮವೇ ಬೇರೆ, ಹಿಂದೂವೇ ಬೇರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಾರಣ ಹಿಂದೂ ಪದದ ಇತಿಹಾಸದ ಅರ್ಥ ಬ್ರಾಹ್ಮಣರಿಗೆ ಚೆನ್ನಾಗಿ ತಿಳಿದಿರುವುದರಿಂದ ತಾವುಗಳು ಹಿಂದೂ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಇದೇ ವಿಷಯದ ಕುರಿತು ಶಾಸಕ ಸತೀಶ್ ಜಾರಕಿಹೊಳಿ ಅವರು ಮಾತನಾಡಿದ್ದಾರೆ. ಆ ಕುರಿತು ಸರ್ಕಾರ ಸಮಿತಿ ರಚನೆ ಮಾಡಿ ಪದದ ಕುರಿತು ಸ್ಪಷ್ಟಪಡಿಸಲಿ ಎಂದು ಅವರು ಕೋರಿದ್ದಾರೆ. ಅದನ್ನು ಒಪ್ಪಿಕೊಳ್ಳದ ಕೆಲ ಸನಾತನ ಬ್ರಾಹ್ಮಣರು ಬುದ್ದ, ಬಸವ, ಅಂಬೇಡ್ಕರ್‍ವಾದಿ, ಸಮಾಜ ಚಿಂತಕ ಸತೀಶ್ ಜಾರಕಿಹೊಳಿ ಅವರನ್ನು ಗುರಿಮಾಡಿ ಅವರ ತೇಜೋವಧೆ ಮಾಡುತ್ತಿರುವುದು ಖಂಡನಾರ್ಹ ಎಂದು ಅವರು ಕಿಡಿಕಾರಿದರು.
10ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಇರಾನ್‍ನ ಪ್ರಸಿದ್ಧ ವಿದ್ವಾಂಸ ಅಬುರೆಹಾನ್ ಮೊಹ್ಮದ್ ಇಟ್ನೋ ಅಹ್ಮದ್ ಅಲ್ ಬುರಾನಿ ಅವರು ಹಿಂದು ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ ಬಳಸಿದರು. ಹಿಂದು ಎಂಬ ಪದದ ಅರ್ಥವನ್ನು ನಾನು ಕಂಡು ಹಿಡಿದದ್ದಲ್ಲ. ಸಾಕಷ್ಟು ಜನರು ಅದರ ಕುರಿತು ಬರೆದಿದ್ದಾರೆ. ಅದನ್ನು ನಾನು ಉಚ್ಛರಿಸಿದ್ದೇನೆ ಎಂದು ಹೇಳಿದ್ದಾರೆ. ಅದನ್ನೇ ನೆಪಮಾಡಿಕೊಂಡು ಸತೀಶ್ ಜಾರಕಿಹೊಳಿ ಅವರ ವಿರುದ್ಧ ಅಪಪ್ರಚಾರ ಮಾಡಿ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ್ ಜಿ. ಯಳಸಂಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಲಿಂಗ್ ಚಲಗೇರಿ, ಜಿಲ್ಲಾಧ್ಯಕ್ಷ ಮಂಜುನಾಥ್ ಎಸ್. ಭಂಡಾರಿ, ಯುವ ಘಟಕದ ಜಿಲ್ಲಾಧ್ಯಕ್ಷ ಅಶ್ರಫ್ ಅಲಿ, ಗುರು ಎಸ್. ಮಾಳಗೆ, ಮೋಹನ್ ಚಿನ್ನಾ, ಕಪಿಲ್ ವಾಲಿ, ಮಲ್ಲೇಶಿ ಸಿ. ಯಾದವ್, ಸಂತೋಷ್ ಪಾಳಾ, ರಾಜು ಎಸ್. ಲೆಂಗಟಿ ಮುಂತಾದವರು ಪಾಲ್ಗೊಂಡಿದ್ದರು.