ಹಿಂದೂ ಧರ್ಮದಲ್ಲಿ ಧರ್ಮ ಸಂಸ್ಕಾರಕ್ಕೆ ಹೆಚ್ಚಿನ ಮಹತ್ವವಿದೆ


ಲಕ್ಷ್ಮೇಶ್ವರ,ಜೂ.3: ಸಮಾಜದಲ್ಲಿ ಇರುವ ಪ್ರತಿಯೊಬ್ಬರಿಗೂ ಸಂಸ್ಕಾರ ಅಗತ್ಯವಾಗಿದ್ದು, ಉತ್ತಮ ಸಂಸ್ಕಾರ ನೀಡುವದು ಅಗತ್ಯವಾಗಿದೆ. ವೀರಶೈವ ಪರಂಪರೆಯಲ್ಲಿ ಮಕ್ಕಳಿಗೆ ಅಯ್ಯಾಚಾರವು ಬಹು ಪ್ರಮುಖ ಘಟ್ಟವಾಗಿದೆ. ಮಕ್ಕಳಿಗೆ ಅಯ್ಯಾಚಾರದ ಸಂಸ್ಕಾರ ನೀಡುವದರಿಂದ ಅವರಿಗೆ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವ ಅಧಿಕಾರ ದೊರಕಿದಂತಾಗುತ್ತದೆ ಎಂದು ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ಹೇಳಿದರು. ಪಟ್ಟಣದ ಚನ್ನಮ್ಮನವನ ಕಲ್ಯಾಣಮಂಟಪದಲ್ಲಿ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಗಡ್ಡದೇವರಮಠ ಭಕ್ತ ಸಮೂಹದಿಂದ ಸಾಮೂಹಿಕ ಅಯ್ಯಾಚಾರ ಕಾರ್ಯಕ್ರಮ, ವಿವಾಹ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಬುಧವಾರ ಅದ್ದೂರಿಯಾಗಿ ನೆರವೇರಿತು.
ಜಗತ್ತಿನಲ್ಲಿ ವೀರಶೈವ ಪರಂಪರೆ ಅತಿ ಶ್ರೇಷ್ಠವಾದ ಪರಂಪರೆಯಾಗಿದೆ. ಇಂತಹ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವದು ಮಕ್ಕಳ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಅಯ್ಯಾಚಾರ ಪಡೆದ ಮಕ್ಕಳು ದಿನನಿತ್ಯ ಪೂಜೆ, ಅನುಷ್ಠಾನ ಮಾಡಿಕೊಂಡು ಧರ್ಮ ಸಂರಕ್ಷಿಸುವಂತಹ ಕಾರ್ಯ ಮಾಡಬೇಕಾಗಿದೆ ಎಂದು ನುಡಿದ ಅವರು ಚನ್ನಮ್ಮನವರು ಈ ನಾಡಿನಲ್ಲಿ ಆಗಿಹೋದ ಅನೇಕ ಸಮಾಜಮುಖಿ ಮಹಿಳೆಯರಲ್ಲಿ ತಮ್ಮ ಸಮಾಜಸೇವೆ, ಧರ್ಮಪರಂಪರೆ, ದಾನಧರ್ಮಕ್ಕೆ ತಮ್ಮನ್ನೆ ತೊಡಗಿಸಿಕೊಂಡಿದ್ದ ಲಿಂ.ಚನ್ನಮ್ಮನವರು ಶಿವಮೂರ್ತೆಯ್ಯ ಗಡ್ಡದೇವರಮಠ ಅವರ ನಿಸ್ವಾರ್ಥ ಸೇವೆಯ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಮತ್ತು ಗಡ್ಡಯ್ಯದೇವರಮಠದ ಭಕ್ತವೃಂದದವರು ಲಿಂ.ಚನ್ನಮ್ಮನವರ ಮೂರ್ತಿಯ ಪ್ರತಿಷ್ಠಾಪನೆ ನಿಮಿತ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದು ಉತ್ತಮ ಸಂಗತಿಯಾಗಿದ್ದು, ಜನ್ಮದಿನವನ್ನು ಆಚರಿಸಿಕೊಂಡ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅವರಿಗೆ ದೇವರು ಉತ್ತಮ ಆರೋಗ್ಯ ಸಂಪತ್ತು ನೀಡಲಿ ಎಂದು ಹಾರೈಸಿದರು.
ಬನ್ನಿಕೊಪ್ಪ ಜಪದಕಟ್ಟಿಮಠದ ಸುಜ್ಞಾನದೇವ ಶಿವಾಚಾರ್ಯರು ಮಾತನಾಡಿ ಅಯ್ಯಾಚಾರ ಎನ್ನುವದು ಮನುಷ್ಯನ ಜೀವನದಲ್ಲಿ ಒಂದು ಮಹತ್ವದ ಘಟ್ಟವಾಗಿದೆ. ಆದರೆ ಇತ್ತಿಚೇಗೆ ಇಂತಹ ಸಂಪ್ರದಾಯಗಳನ್ನು ಪಾಲಿಸುವವರ ಸಂಖ್ಯೆ ವಿರಳವಾಗುತ್ತಿದೆ. ಪ್ರತಿಯೊಬ್ಬ ಪಾಲಕರು ಮಗುವಿಗೆ ಅರ್ಹ ವಯಸ್ಸಿನಲ್ಲಿ ಅಯ್ಯಾಚಾರವನ್ನು ಮಾಡಿಸಿ ಆತನಿಗೆ ಉತ್ತಮ ಸಂಸ್ಕಾರ ನೀಡುವದು ಅವಶ್ಯವಾಗಿದೆ, ಉತ್ತಮ ಸಂಸ್ಕಾರವಂತ ಸಮಾಜದಲ್ಲಿ ಶ್ರೇಷ್ಠ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನುಡಿದ ಅವರು ಚನ್ನಮ್ಮನವರ ಕಾಯಕ ಧಾನ ಧರ್ಮ ಇಂದಿಗೂ ಜನಜನಿತವಾಗಿವೆ ಅಂತಹ ಮಹಾನ ತಾಯಿಯನ್ನು ಸ್ಮರಿಸುವ ಮೂಲಕ ಅವರ ದಾರಿಯಲ್ಲಿ ಸಾಗುವಂತಾಗಲಿ ಎಂದು ಹಾರೈಸಿದರು.
20 ಕ್ಕೂ ಹೆಚ್ಚು ಮಕ್ಕಳು ಅಯ್ಯಾಚಾರದ ದೀಕ್ಷೆಯನ್ನು ಸ್ವಾಮಿಗಳಿಂದ ಪಡೆದುಕೊಂಡರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮವು ನೆರವೇರಿತು. ವಟುಗಳಿಗೆ ಜೋಳಿಗೆ, ಕೈಯಲ್ಲಿ ದಂಡ ಅವರ ಬಲಕಿವಿಯಲ್ಲಿ ಪಂಚಾಕ್ಷರಿ ಮಂತ್ರ ಭೋದಿಸಿ, ಲಿಂಗ-ಅಂಗ ಸಂಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಶಿರಹಟ್ಟಿ ಸಂಸ್ಥಾನಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಆಗಮಿಸಿ ವಟುಗಳನ್ನು ಮತ್ತು ವಧುವರರನ್ನು ಆಶೀರ್ವದಿಸಿದರು. ಮಳೆಮಲ್ಲಿಕಾರ್ಜು ಶ್ರೀಗಳು ಉಪಸ್ಥಿತರಿದ್ದರು.
ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ, ನಾಗಪ್ಪ ವಡಕಣ್ಣವರ, ಎಸ್.ಪಿ.ಪಾಟೀಲ, ಚಂಬಣ್ಣ ಬಾಳಿಕಾಯಿ, ಆನಂದ ಗಡ್ಡದೇವರಮಠ, ಜಯಲಕ್ಷ್ಮೀ ಗಡ್ಡದೇವರಮಠ, ರಾಜಣ್ಣ ಕುಂಬಿ, ಎಂ.ಸಿದ್ದಲಿಂಗಯ್ಯ ಸೇರಿದಂತೆ ಅನೇಕರಿದ್ದರು.