ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಾಗಾರ

ಧಾರವಾಡ, ಜು.22: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಸಾಧನಕೇರಿಯ ಬೇಂದ್ರೆ ಭವನದಲ್ಲಿ ಇಂದಿನಿಂದ ದಿ. 24 ರ ವರೆಗೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಾಗಾರವನ್ನು ಏರ್ಪಡಿಸಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಎಸ್.ಹೆಚ್. ಶಿವರುದ್ರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 23 ರಂದು ಹಿಂದೂಸ್ತಾನಿ ಸಂಗೀತದಲ್ಲಿ ಧ್ವನಿ ಸಂಸ್ಕರಣೆಯ ಪ್ರಾಮುಖ್ಯತೆ ಕುರಿತು ಪಂ.ಕೈವಲ್ಯಕುಮಾರ ಗುರವ, ರಾಗ ಪ್ರಸ್ತುತೀಕರಣ ಕುರಿತು ಡಾ.ಶಕ್ತಿ ಪಾಟೀಲ ಹಾಗೂ ಗಾಯನ ಪ್ರದರ್ಶನದ ಮಹತ್ವ ಹಾಗೂ ಪ್ರಾಯೋಗಿಕ ಆಯಾಮಗಳು ಕುರಿತು ಪಂ.ಕುಮಾರ ಮರಡೂರ ತರಬೇತಿ ನೀಡಲಿದ್ದಾರೆ.

ಜುಲೈ 24 ರಂದು ಮಧ್ಯಾಹ್ನ 12.30 ಗಂಟೆಗೆ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ. ಸಮಾರೋಪ ಭಾಷಣವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ತತೆಯನ್ನು ಅಕಾಡೆಮಿ ಅಧ್ಯಕ್ಷ ಆನೂರು ಅನಂತ ಕೃಷ್ಣಶರ್ಮ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂ.ಸೋಮನಾಥ ಮರಡೂರ, ಖ್ಯಾತ ವಯೋಲಿನ್ ಕಲಾವಿದ ಪಂ.ವಾದಿರಾಜ ನಿಂಬರಗಿ, ಖ್ಯಾತ ಸಿತಾರ ಕಲಾವಿದ ಉಸ್ತಾದ್ ಛೋಟೆ ರಹಿಮತ್ ಖಾನ್, ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥ ಡಾ.ಮೃತ್ಯುಂಜಯ ಅಗಡಿ ,ಆಕಾಶವಾಣಿ ಉದ್ಘೋಷಕ ಡಾ.ಶಶಿಧರ ನರೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ನೇಚರ್ ಫಸ್ಟ್ ಇಕೋ ವಿಲೇಜ, ಸಂಸ್ಥಾಪಕ ಪಿ.ವಿ.ಹಿರೇಮಠ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದ ನಂತರ ಶಿಬಿರಾರ್ಥಿಗಳಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸುವರು ಮತ್ತು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದರು.

ಅಕಾಡೆಮಿ ಸದಸ್ಯ ಸಂಚಾಲಕ ವೀರಣ್ಣ ಪತ್ತಾರ, ಹೇಮಾ ವಾಘ್ಮೋಡೆ, ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಎಂ.ಎಂ ಚಿಕ್ಕಮಠ, ಪ್ರಕಾಶ ಬಾಳಿಕಾಯಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.