ಹಿಂದೂಯೇತರ ಸಮುದಾಯದ ಜತೆ ಬೆರೆಯಿರಿ : ಭಾಗವತ್

ಲಖನೌ,ಸೆ.೨೪- ದೇಶದಲ್ಲಿ ಹಿಂದೂಗಳಲ್ಲದವರ ಜೊತೆ ಹೆಚ್ಚು ಕೆಲಸ ಮಾಡಿದಾಗ ಮಾತ್ರ ಎಲ್ಲರನ್ನು ಒಳಗೊಂಡ ಸಂಘಟನೆಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಆರ್ ಎಸ್ ಎಸ್ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಸಂಘದ ಪದಾಧಿಕಾರಿಗಳು ಹಿಂದೂಗಳಲ್ಲದ ಸಮುದಾಯದ ಜೊತೆ ಹೆಚ್ಚು ಬೆರೆಯಬೇಕು ಆಗ ಮಾತ್ರ ಹಿಂದುತ್ವದ ಜ್ಯೋತಿ ಹೊತ್ತಿಸುವ ಬದಲು ಎಲ್ಲರನ್ನೂ ಒಳಗೊಂಡಿರುವ ಸಂಘಟನೆಯಾಗಿ ಕಾಣುವ ಪ್ರಯತ್ನವಾಗಲಿದೆ ಎಂದಿದ್ದಾರೆ.
ನಿರಾಲಾ ನಗರದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಹಿಂದೂಯೇತರ ಸಿಖ್ಖರು, ಕ್ರಿಶ್ಚಿಯನ್ನರು, ಮುಸ್ಲಿಮರು, ಜೈನರು ಮತ್ತು ಇತರ ಧರ್ಮಗಳ ನಡುವೆ ಕೆಲಸ ಮಾಡಲು ನಿರ್ದೇಶನಗಳನ್ನು ಆರೆಸ್‌ಎಸ್ ಅವಧ್ ಪ್ರಾಂತ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ.
ಈ ನಿರ್ದೇಶನಗಳು ಸಭೆಯ “ಸಾಮಾಜಿಕ್ ಸದ್ಭವ” -ಸಾಮಾಜಿಕ ಸೌಹಾರ್ದತೆ ಕಾರ್ಯಸೂಚಿಯ ಭಾಗವಾಗಿದೆ. ರಾಜಕೀಯ ವೀಕ್ಷಕರು ಹೇಳುವಂತೆ ಇದು ಸಂಘ ಪರಿವಾರದ ಅಜೆಂಡಾದಲ್ಲಿ ಸ್ವಲ್ಪ ಸಮಯದಿಂದ ಇದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಬಿಜೆಪಿ ಕಾರ್ಯಕರ್ತರಿಗೆ ಪಾಸ್ಮಾಂಡ ಮುಸ್ಲಿಮರ ನಡುವೆ ಕೆಲಸ ಮಾಡಲು ಕರೆ ನೀಡಿದ್ದಾರೆ. ಇದೀಗ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದೂಗಳಲ್ಲದ ಮಂದಿಯ ಜೊತೆ ಹೆಚ್ಚು ತೊಡಗಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಸಂಘ ಈಗಾಗಲೇ ಹಿಂದೂಗಳಲ್ಲದವರ ನಡುವೆ ಕೆಲಸ ಮಾಡುತ್ತಿದ್ದರೂ, ಆ ಗುಂಪಿನಲ್ಲಿ ಕೆಲಸಕ್ಕೆ ಆದ್ಯತೆ ನೀಡುವಂತೆ ಅದರ ಪದಾಧಿಕಾರಿಗಳನ್ನು ಕೇಳಿದ್ದು ಇದೇ ಮೊದಲು ಎಂದು ಹಿರಿಯ ಆರೆಸ್‌ಎಸ್ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.