ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೫; ಕರ್ನಾಟಕದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಹಾಗೂ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲ ಸಂಘಟನೆಯ ನೇತೃತ್ವದಲ್ಲಿ ಹಿಂದೂಪರ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಈ ವೇಳೆ ಹಿಂದೂ ರಾಷ್ಟ್ರಸೇನೆ ಕರ್ನಾಟಕ ವಕ್ತಾರ ಜಿ.ಸಂದೀಪ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರ ಮೇಲೆ ವಿವಿಧ ರೀತಿಯ ಆಕ್ರಮಣಗಳು ಹೆಚ್ಚಾಗಿವೆ. ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರಿಗೆ ಥಳಿಸುವುದು ಮತ್ತು ಭಯ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಯುತ್ತಿವೆ, ಜೈನ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಮತ್ತು ಯುವ ಬ್ರಿಗೇಡ್‌ನ ವೇಣುಗೋಪಾಲ ಇವರ ಹತ್ಯೆ ಸೇರಿದಂತೆ ಹಲವಾರು ಘಟನೆಗಳು ಹಿಂದೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಅಷ್ಟೇ ಅಲ್ಲದೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಪ್ರತಿ ರವಿವಾರ ನಡೆಯುತ್ತಿದ್ದ ನಾಗರಕಟ್ಟೆಯ ಪೂಜೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಬಕ್ರೀದ್ ಸಮಯದಲ್ಲಿ ಬಾದಾಮಿ, ಶಿಕಾರಿಪುರ, ಶಿರಸಿ ಸೇರಿದಂತೆ ಹಲವೆಡೆ ಅಕ್ರಮವಾಗಿ ಗೋಹತ್ಯೆ ಮಾಡಿ, ಗೋವಿನ ಎಲುಬುಗಳನ್ನು ದೇವಸ್ಥಾನ, ಹಿಂದೂ ಮನೆಗಳ ಎದುರು ಎಸೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ, ಹಾಗಾಗಿ ಹಿಂದೂ ಕಾರ್ಯಕರ್ತರಿಗೆ, ಹಿಂದೂ ಧರ್ಮಕ್ಕೆ ಹೋರಾಟ ಮಾಡುವವರಿಗೆ ರಕ್ಷಣೆ ನೀಡಬೇಕು, ಹಿಂದೂಗಳ ಮೇಲೆ ಆಕ್ರಮಣ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕ್ಪ್ ಬೋರ್ಡ್ ತನ್ನ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಸರಕಾರಿ ಮತ್ತು ಖಾಸಗಿ ಜಮೀನುಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಆ ಮೂಲಕ ದೇಶದಲ್ಲಿ 8 ಲಕ್ಷ ಎಕರೆ ಜಮೀನನ್ನು ಕಬಳಿಸಿದೆ. ಇದೊಂದು ದೊಡ್ಡ ‘ಲ್ಯಾಂಡ್ ಜಿಹಾದ್’ ಆಗಿದೆ. ಹಾಗಾಗಿ ಈ ಕಾನೂನನ್ನು ರದ್ದುಗೊಳಿಸಿ ಜಮೀನಿನ ನಿಜವಾದ ಮಾಲೀಕರಿಗೆ ಅದರ ಅಧಿಕಾರವನ್ನು ನೀಡಬೇಕು. ದೇಶದಲ್ಲಿ ಸಮಾನ ನಾಗರಿಕ ಕಾನೂನು’ ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತರ ಹೆಸರಿನಲ್ಲಿ ಜಾರಿಯಲ್ಲಿರುವ ಎಲ್ಲಾ ವಿಶೇಷ ಸೌಲಭ್ಯಗಳು, ಕಾನೂನುಗಳು, ಆಯೋಗಗಳು, ಮಂಡಳಿಗಳು, ಸರಕಾರಿ ಇಲಾಖೆಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲರಿಗೂ ಸಮಾನ ನಡವಳಿಕೆ ಸಿಗುವಂತಾಗಬೇಕು. ಈ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ‘ವಕ್ಫ್, ಕಾನೂನು’ ವಿರುದ್ಧ ಪ್ರಬಲ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿವಿಜಯ್ ರೇವಣ್ಕರ್,ಸೋಮಶೇಖರ್ ,ಶ್ರೀನಿವಾಸ್ ಪವಾರ್,ಕಿರಣ್,ಧನು,ಶಿವರಾಜ್, ಹಿಂದೂ ಜನಜಾಗೃತಿ ಸೇನಾ ಸಮಿತಿ ರಾಜ್ಯಾಧ್ಯಕ್ಷ ಚೇತನ್, ಓಬಳೇಶ್, ಗಣೇಶ್,ಆಕಾಶ್,ಮಂಜುನಾಥ್,ಆದರ್ಶ್,ಸುರೇಶ್,ರೂಪ,ರಾಧ,ಮನೋಜ್,ಶಿವಕುಮಾರ್ ಮತ್ತಿತರರಿದ್ದರು.