ಹಿಂದುಳಿವಿಕೆಗೆ ನಿಜಾಮನ ಆಳ್ವಿಕೆಯೆ ಕಾರಣ: ಸತ್ಯನಾರಾಯಣ ಬಟ್ಟು

ಕಲಬುರಗಿ:ಸೆ.15:ಕಲ್ಯಾಣ ಕರ್ನಾಟಕ ಪ್ರದೇಶ ಹಿಂದುಳಿಯಲು ಹೈದರಾಬಾದಿನ್ ನಿಜಾಮನ ಆಳ್ವಿಕೆಯೇ ಕಾರಣವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಗುರುವಾರ ಆಳಂದ ಪಟ್ಟಣದ ಆರ್ಯ ಸಮಾಜ ಮಂಗಲ ಕಾರ್ಯಾಲಯದಲ್ಲಿ ಆರ್ಯ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ನೆನಪಿಗಾಗಿ ಹೊರತಂದ ವಿಮೋಚನಾ ಚಳುವಳಿಯ ವೀರಗಾಥೆ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಭಾಗದ ಕೃಷಿ, ನೀರಾವರಿ, ಶಿಕ್ಷಣ ಕ್ಷೇತ್ರ ಸೇರಿದಂತೆ ಅನೇಕ ರಂಗಗಳು ಹಿಂದುಳಿಯಲು ಕಾರಣ ನಿಜಾಮರ ನೀತಿಗಳೇ ಕಾರಣವಾಗಿವೆ ಅವರ ದಬ್ಬಾಳಿಕೆಯಿಂದ ಜನ ರೋಸಿ ಹೋಗಿದ್ದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳು ಸ್ವತಂತ್ರಗೊಳ್ಳದೇ ನಿಜಾಮರ ಕಪಿ ಮುಷ್ಠಿಯಲ್ಲಿ ಸಿಕ್ಕಿ ನರಳುತ್ತಿದ್ದವು ಇಲ್ಲಿಯ ಜನರಿಗೆ ಸ್ವಾತಂತ್ರ್ಯ ಎನ್ನುವುದು ಮರೀಚಿಕೆಯಾಗಿತ್ತು ಆದರೆ ಇಲ್ಲಿಯ ಜನರ ಸಂಘಟಿತ ಹೋರಾಟದಿಂದ ಅಂತಿಮವಾಗಿ ಸ್ವಾತಂತ್ರ್ಯ ಲಭಿಸಿತು ಎಂದು ಹೇಳಿದರು.
ವಿಮೋಚನಾ ಚಳುವಳಿಯಲ್ಲಿ ಆರ್ಯ ಸಮಾಜದ ಪಾತ್ರ ಅತ್ಯಂತ ಮಹತ್ವವಾದುದು. ಆರ್ಯ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಜನರನ್ನು ಸಂಘಟಿಸಿ ದಾಸ್ಯದ ವಿರುದ್ಧ ಹೋರಾಡಲು ಕರೆ ನೀಡಿದ್ದರು ಅಲ್ಲದೇ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಸಾಮಥ್ರ್ಯ ತೋರಿದ್ದರು ಎಂದು ನುಡಿದರು.
ಈ ಭಾಗದ ಇಂದಿನ ಜ್ವಲಂತ ಸಮಸ್ಯೆಗಳಿಗೆ ಆಗಿನ ನಿಜಾಮನ ಆಡಳಿತ ಕಾರಣವಾಗಿದೆ. ಅವರ ವಿರುದ್ಧ ಹೋರಾಡುವ ಮನೋಭಾವ ಬೆಳಿಸಿಕೊಂಡ ಮೇಲೆ ಜನಗಳಿಗೆ ತಮ್ಮ ಹಕ್ಕಿನ ಅರಿವಾಯಿತು ಎಂದು ಹೇಳಿದರು.
ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು, ನಿಜಾಮರ ಆಳ್ವಿಕೆಯಿಂದ ಈ ಭಾಗದ ಜನರ ಮೇಲೆ ಅನೇಕ ರೀತಿಯ ದೌರ್ಜನ್ಯಗಳಾಗಿವೆ. ಕಾಸಿಂ ರಜ್ವೀ ಅನೇಕ ಹಿಂದೂಗಳ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದಾನೆ. ಕಾಸಿಂ ರಜ್ವೀ ಒಬ್ಬ ಕ್ರೂರ, ಮತಾಂಧನಾಗಿದ್ದನು. ಆಳಂದ ಭಾಗದಲ್ಲಿ ಎ ವಿ ಪಾಟೀಲ, ಗುರು ಭೀಮರಾವ ಪಾಟೀಲ, ದಿಗಂಬರ್ ಕಲ್ಮಣಕರ ಸೇರಿದಂತೆ ಅನೇಕ ಹೋರಾಟಗಾರರು ಅಲ್ಲಲ್ಲಿ ಶಿಬಿರಗಳನ್ನು ನಡೆಸಿ ಮುಂದಾಳತ್ವ ವಹಿಸಿದ್ದರು. ಸರ್ದಾರ ಪಟೇಲರ ಚಾಣಾಕ್ಷತೆಯ ಕಾರ್ಯಾಚಾರಣೆಯಿಂದ ಈ ಭಾಗ ವಿಮೋಚನೆಯಾಯಿತು ಎಂದರು.
ಅಂದು ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಡಿದ್ದರ ಫಲವಾಗಿ ಇಂದು ನಾವು ನೆಮ್ಮದಿಯಾಗಿದ್ದೇವೆ. ಸಧ್ಯದ ಆತಂಕದ ದಿನಗಳು ಮತ್ತೆ ಬರಬಹುದು ಅದಕ್ಕಾಗಿ ನಾವೇಲ್ಲರೂ ನಮ್ಮ ಧರ್ಮ, ದೇಶಭಿಮಾನ ಬೆಳಸಿಕೊಂಡು ಮುನ್ನೆಡೆಯಬೇಕಾಗಿದೆ ಈ ನಿಟ್ಟಿನಲ್ಲಿ ಈಗಲೇ ಜಾಗೃತರಾಗುವುದು ಅವಶ್ಯಕವಾಗಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ರೋಹಿಣಾಕ್ಷ ಶಿರ್ಲಾಲು, ಡಾ, ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಚವಾಣಶೆಟ್ಟಿ, ಮುರಳಿಧರ ಎಕಲೂರಕರ, ಸಾಯಬಣ್ಣ ಘೋಡಕೆ, ವಾಸುದೇವ ಕುಲಕರ್ಣಿ, ಜಿ.ಪಂ ಮಜಿ ಸದಸ್ಯ ಮಲ್ಲಿನಾಥ ಪಾಟೀಲ ಮದಗುಣಕಿ, ಆಳಂದ ಬಿಜೆಪಿ ಅಧ್ಯಕ್ಷ ಆನಂದ ಪಾಟೀಲ ಕೋರಳ್ಳಿ, ಸಂತೋಷ ಹಾದಿಮನಿ, ಆರ್ಯ ಸಮಾಜದ ಅಧ್ಯಕ್ಷ ರಾಮಕೃಷ್ಣ ಸುರೆ ಇದ್ದರು.
ಕಾರ್ಯಕ್ರಮದಲ್ಲಿ ವಿಕೆಜಿ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಆರ್ಯ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಕಾಶ ಮಾನೆ ಸ್ವಾಗತಿಸಿದರೆ, ಸುಜ್ಞಾನಿ ಪೊದ್ದಾರ ವಂದಿಸಿದರು. ಆಯೋಜಕ ಸಂಜಯ ಮಿಸ್ಕಿನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಸುನೀಲ ಹಿರೋಳಿಕರ್ ನಿರೂಪಿಸಿದರು.