ಹಿಂದುಳಿದ ಸಮುದಾಯಗಳಿಗೆ ಧ್ವನಿಯಾದ ದೇವರಾಜ ಅರಸು


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಅ.21 : ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಹಿಂದುಳಿದವರಿಗಾಗಿ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಹಿಂದುಳಿದ ಸಮುದಾಯಗಳಿಗೆ ಧ್ವನಿಯಾಗಿದ್ದಾರೆ ಎಂದು ಎಸ್‍ಆರ್‍ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎಂ.ವಿಜಯಕುಮಾರ್ ಹೇಳಿದರು.
ಪಟ್ಟಣದ ಎಸ್‍ಆರ್‍ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ದೇವರಾಜ ಅರಸು ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸದ್ಭಾವನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಶೇ 5ರಷ್ಟು ಜನರಿಗಿದ್ದ ಭೂ ಒಡೆತನ ಸರ್ವರಿಗೂ ಒದಗಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಅವರ ಕನಸಿನ ಕೂಸಾಗಿರುವ ವಿದ್ಯಾರ್ಥಿ ನಿಲಯಗಳು ಅನೇಕ ಬಡ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುವುದನ್ನು ತಪ್ಪಿಸಿವೆ. ಇಂದಿನ ಆಧುನಿಕ  ಗುರುಕುಲಗಳಾಗಿ ಮಾರ್ಪಾಡಾಗಿರುವ ವಿದ್ಯಾರ್ಥಿ ನಿಲಯಗಳಲ್ಲಿ ಸರ್ಕಾರಗಳು ಉತ್ತಮ ಸೌಲಭ್ಯಗಳನ್ನು ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಸಾಧನೆ ಮೆರೆಯಬೇಕು ಎಂದು ತಿಳಿಸಿದರು.
ರಾಜೀವ್ ಗಾಂಧಿಯವರು ವೈಜ್ಞಾನಿಕ ಹಾಗೂ ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚು ಒತ್ತು ನೀಡಿದ್ದರಿಂದ ವಿಜ್ಞಾನ, ತಂತ್ರಜ್ಞಾನದಲ್ಲಿ ದೇಶ ಉನ್ನತಿ ಸಾಧಿಸಲು ಸಾಧ್ಯವಾಗಿದೆ. ಇಂತಹ ಮಹಾತ್ಮರ ಜನ್ಮದಿನವನ್ನು ಸದ್ಭಾವನಾ ದಿನವನ್ನಾಗಿ ಆಚರಿಸುತ್ತಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ.ಅಶೋಕ ಮಾತನಾಡಿ, ದೇವರಾಜ ಅರಸು ಅವರು ಮುಂದಾಲೋಚನೆಯ ಹಿನ್ನೆಲೆಯಲ್ಲಿ 1978ರಲ್ಲಿ 210 ವಿದ್ಯಾರ್ಥಿ ನಿಲಯಗಳನ್ನು ಕೇವಲ 10,500 ವಿದ್ಯಾರ್ಥಿಗಳಿಗೆ ಆರಂಭಿಸಲಾಗಿತ್ತು. ಇಂದು ರಾಜ್ಯಾದ್ಯಂತ 23619 ವಿದ್ಯಾರ್ಥಿ ನಿಲಯಗಳಿದ್ದು, 2,57,560 ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕ ವಿಜಯಕುಮಾರ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ನಿಂಗಪ್ಪ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಆರಂಭದಲ್ಲಿ ಅಮೃತ  ಪ್ರಾರ್ಥಿಸಿದರು. ಟಿ.ಎಂ.ಶೋಭಾ ಸ್ವಾಗತಿಸಿದರು. ಆನಂದ ನಿರೂಪಿಸಿದರು.