ಹಿಂದುಳಿದ ವರ್ಗದ ಮಹಿಳೆಯರಿಗೆ ಒಳ ಮೀಸಲಾತಿ ನೀಡುವಂತೆ ಕೊರಬು ಆಗ್ರಹ

ಅಫಜಲಪುರ: ಸೆ.21:ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಶೇ. 33 ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ ಕೊರುಬು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೂತನ ಸಂಸತ್ ಭವನದಲ್ಲಿ ನಡೆಯುತ್ತಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಆದರೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳ ಮೀಸಲಾತಿ ನೀಡದೆ ಇದ್ದರೆ ಅನ್ಯಾಯ ಮಾಡಿದಂತಾಗುವುದು. ಅಷ್ಟೇ ಅಲ್ಲ ಮೀಸಲಾತಿಯ ಉದ್ದೇಶವೇ ವಿಫಲವಾಗಲಿದೆ. ಹೀಗಾಗಿ ಎಸ್ಸಿ, ಎಸ್ಟಿ, ಒಬಿಸಿ ಮಹಿಳೆಯರಿಗೆ ವಿಶೇಷ ಮೀಸಲಾತಿ ನೀಡುವ ಮೂಲಕ ಎಲ್ಲ ವರ್ಗದ ಹಿಂದುಳಿದ ಮಹಿಳಾ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಸಂದರ್ಭದಲ್ಲಿಯೇ ಈ ಮಹಿಳಾ ಮೀಸಲಾತಿ ಅನುಮೋದಿಸಬೇಕಾಗಿತ್ತು. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಿರುವುದು ಚುನಾವಣಾ ಗಿಮಿಕ್ ಆಗಿದೆ ಎಂದು ಲೇವಡಿ ಮಾಡಿದರು.
ಅಲ್ಲದೆ ಕಾಂಗ್ರೇಸ್ ಹೈಕಮಾಂಡ್ ಉಪಮುಖ್ಯಮಂತ್ರಿಗಳ ಸ್ಥಾನಗಳನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡರೆ ಅದರಲ್ಲಿ ಪಂಚಮಸಾಲಿ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡುವಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಶ್ರೀಗಳು ಈಗಾಗಲೇ ಒತ್ತಾಯಿಸಿದ್ದು ಅವರ ಹೇಳಿಕೆಗೆ ನನ್ನ ಸಹಮತವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.