ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಸ್ಥಳಾಂತರಿಸಲು ಒತ್ತಾಯ

ಕಲಬುರಗಿ,ಜು.12-ನಗರದ ತಾರಫೈಲ್ ಬಡಾವಣೆಗೆ ಹೊಂದಿಕೊಂಡಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಸ್ಥಳಾಂತರಿಸಬೇಕು ಎಂದು ಡಿ.ದೇವರಾಜ ಅರಸು ಮತ್ತು ಎಸ್.ಬಂಗಾರಪ್ಪ ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಾ.ಚಿ.ಸಿ.ನಿಂಗಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನೀರಡಗಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಕಛೇರಿಗೆ ಹೋಗಿ ಬರುವುದಕ್ಕೆ ಹೇಳಿಕೊಳ್ಳುವ ಯಾವುದೇ ರೀತಿಯ ಸಾರಿಗೆ ಸೌಲಭ್ಯವಿರುವುದಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಇಲಾಖೆಗೆ ಮಾಹಿತಿ ಪಡೆಯಲು ಮತ್ತು ಒಪ್ಪಿಸಲಿಕ್ಕೆ ಅನೇಕ ಸಾರಿ ಬಂದು ಹೋಗಬೇಕಾಗುತ್ತದೆ. ಇನ್ನೂ ಆಟೊರೀಕ್ಷಾದವರನ್ನು ಕಛೇರಿಗೆ ಬರುತ್ತೀರಾ ಎಂದು ಕೇಳಿದರೆ ತುಂಬಾ ಹಣ ಕೇಳುತ್ತಾರೆ. ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯನ್ನು ಹುಡುಕುವುದೆ ಒಂದು ಸಾಹಸವಾಗುತ್ತದೆ. ಜೊತೆಗೆ ಒಬ್ಬಂಟಿ ಹೆಣ್ಣು ಮಕ್ಕಳು ಹೋಗಿ ಬರಲು ಈ ಕಛೇರಿಯ ಸ್ಥಳ ಸೂಕ್ತವಾಗಿಲ್ಲ, ಇದರಿಂದ ನಿತ್ಯ ಕಛೇರಿಗೆ ಭೇಟಿ ನೀಡಲು ಬರುವವರಿಗೆ ಹಲವಾರು ಸಮಸ್ಯೆಗಳನ್ನು ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ಜಿಲ್ಲಾ ಕಛೇರಿ ಅಂದ ಮೇಲೆ ಸಾರ್ವಜನಿಕರಿಗೆ ಹೋಗಿಬರಲು ಅನುಕೂಲಕರವಾದ ಸ್ಥಳದಲ್ಲಿರುವುದು ಸೂಕ್ತ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀವರವಾಗಿ ಪರಿಗಣಿಸಿ ಬೇಗನೆ ಈ ಆಡಳಿತ ಕಛೇರಿಯನ್ನು ಮಿನಿವಿಧಾನಸೌಧ ಕಟ್ಟಡದಲ್ಲಿ ಸ್ಥಳಾವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.