
ಕಲಬುರಗಿ,ಆ.22: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳಿಗೆ ಮಾಡಿದ ಅನ್ಯಾಯವನ್ನು ವಿರೋಧಿಸಿ ಬೆಂಗಳೂರಿನ ಅರಮನೆ ಮೈದಾನದ ದ್ವಾರ ಮೂರರಲ್ಲಿ ಸೆಪ್ಟೆಂಬರ್ 9ರಂದು ಚಿಂತನ- ಮಂಥನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಈಡಿಗರ ಮಹಾ ಮಂಡಳದ ಬಾಲರಾಜ್ ಗುತ್ತೇದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಮತ್ತು ಅತೀ ಹಿಂದುಳಿದ ಸಮುದಾಯಗಳಾದ ರಾಜ್ಯದ ಬಿಲ್ಲವ್, ಈಡಿಗ, ದೀವರ್, ನಾಮಧಾರಿ, ಮಡಿವಾಳ್, ವಿಶ್ವಕರ್ಮ, ಅಲೆಮಾರಿ, ಅರೆ ಅಲೆಮಾರಿ, ಬೆಸ್ತ, ತಿಗಳ, ಕ್ಷೌರಿಕ, ದೇವಾಂಗ, ಗೊಲ್ಲ, ಯಾದವ್, ಉಪ್ಪಾರ್, ಹಾಲಕ್ಕಿ, ಒಕ್ಕಲಿಗ, ಮೇದಾರ್, ಕುಂಬಾರ್, ಗೆಜ್ಜೆಗಾರ್ ಸೇರಿದಂತೆ ಹಲವು ಹೆಸರುಗಳಿಂದ ಗುರುತಿಸಿಕೊಂಡು ಸುಮಾರು ಒಂದು ಕೋಟಿ ಜನಸಂಖ್ಯೆ ಹೊಂದಿದ್ದು, ಅಂತಹ ಸಮುದಾಯಗಳಿಗೆ ರಾಜ್ಯ ಸರ್ಕಾರವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ವಂಚಿತಗೊಳಿಸಿದೆ ಎಂದು ದೂರಿದರು.
ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ವಿವಿಧ 24 ನಿಗಮ ಮಂಡಳಿಗಳನ್ನು ಸರ್ಕಾರ ಸ್ಥಾಪಿಸಿದ್ದು, ಆ ನಿಗಮಗಳಲ್ಲಿ ಕೇವಲ ಏಳು ನಿಗಮಗಳಿಗೆ ಅನುದಾನ ನೀಡಿ, ಉಳಿದ ನಿಗಮಗಳನ್ನು ಕಡೆಗಣಿಸಿದೆ. ಇಂತಹ ತಾರತಮ್ಯ ನೀತಿಯನ್ನು ಖಂಡಿಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಜರುಗುವ ಸಮಾವೇಶವನ್ನು ತೆಲಂಗಾಣ್ ರಾಜ್ಯದ ವಸತಿ ಸಚಿವ ಜೋಗಿ ರಮೇಶ್ ಅವರು ಉದ್ಘಾಟಿಸುವರು. ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಗಣ್ಯರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸತೀಶ್ ಗುತ್ತೇದಾರ್, ವೆಂಕಟೇಶ್ ಯಾದವ್, ಮಹಾದೇವ್ ಗುತ್ತೇದಾರ್, ಅಂಬಯ್ಯ ಗುತ್ತೇದಾರ್, ಲೋಹಿತ್ ವಿಶ್ವಕರ್ಮ, ಸುಭಾಷ್ ಮುಂತಾದವರು ಉಪಸ್ಥಿತರಿದ್ದರು.