
.ಸಂಜೆವಾಣಿ ವಾರ್ತೆಕೂಡ್ಲಿಗಿ. ಆ 21 :- ದಲಿತ,ಹಿಂದುಳಿದವರ ಬಡವರ ಪಾಲಿಗೆ ಹಸಿವು ನೀಗಿಸಿ ಶಿಕ್ಷಣದ ಜೊತೆಗೆ ವಸತಿ ನಿಲಯಗಳ ಸ್ಥಾಪಿಸಿ ಅನ್ನ ಕೊಟ್ಟ ಪುಣ್ಯಾತ್ಮ, ಹಾವನೂರು ವರದಿ ಮೂಲಕ ಮೀಸಲಾತಿ ಕಲ್ಪಿಸಿ ಸಮಾನತೆ ಕಾಪಾಡಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಕರ್ನಾಟಕದ ಆಸ್ತಿ ಎಂದು ತಹಸೀಲ್ದಾರ್ ಟಿ ಜಗದೀಶ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಆಶಾಕಿರಣ ದೇವರಾಜು ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ನಾನು ಸಹ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಉನ್ನತ ಹುದ್ದೆಯಲ್ಲಿರುವಲ್ಲಿ ಅವರ ಕೊಡುಗೆ ಇದೆ ಅಲ್ಲದೆ ಎಲ್ಲರೂ ವಿದ್ಯಾವಂತರಾಗಿ ಉನ್ನತ ಹುದ್ದೆ ಅಲಂಕರಿಸುವಂತೆ ಮಕ್ಕಳಿಗೆ ಕಿವಿ ಮಾತು ಹೇಳಿದರು.ಮುಖ್ಯಭಾಷಣಕಾರರಾಗಿ ಆಗಮಿಸಿದ ಹುಲುಗಪ್ಪ ಮಾತನಾಡಿ ಬಿಎಸ್ಸಿ ಪದವೀಧರರಾಗಿ ಕೃಷಿಯನ್ನು ಅವಲಂಬಿಸಿದ ದೇವರಾಜು ಅರಸು ಅವರಿಗೆ ರಾಜಕೀಯವೆಂಬುದು ಹರಿಸಿಕೊಂಡು ಬಂದ ಅವಕಾಶವಾಗಿದ್ದು ಹಂತ ಹಂತವಾಗಿ ಅವರ ರಾಜಕೀಯ ಚಿತ್ರಣವನ್ನು ವಿವರಿಸಿದರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಯೋಜನೆಗಳಲ್ಲಿ ಉಳುವವನೆ ಭೂ ಒಡೆಯ, ಮಲಹೋರುವ ಪದ್ಧತಿ ನಿಷೇಧ ಜಾರಿ ಹಾವನೂರು ವರದಿ ಮೂಲಕ ಮೀಸಲಾತಿ ಜಾರಿ ಇಂದಿಗೂ ಹಿಂದುಳಿದ ಅನೇಕರ ಪಾಲಿಗೆ ಮಿನುಗದ ನಕ್ಷತ್ರದಂತೆ ದೇವರಾಜು ಅರಸು ಅವರನ್ನು ಕಾಣಬಹುದು ಎಂದರು.ಈ ಸಂದರ್ಭದಲ್ಲಿ ಕೂಡ್ಲಿಗಿ ಪ ಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ಜಿ ಪಂ ಉಪ ವಿಭಾಗದ ಎಇಇ ಮಲ್ಲಿಕಾರ್ಜುನ, ಬಿಸಿಎಂ ತಾಲೂಕು ವಿಸ್ತೀರ್ಣಧಿಕಾರಿ ಪಂಪಾಪತಿ, ಬಿಇಓ ಪದ್ಮನಾಭ ಕರಣಂ, ಉಪಾಖಜನಾಧಿಕಾರಿ ಪ್ರಭುದೇವ, ನಿವೃತ್ತ ವಸತಿ ನಿಲಯ ಪಾಲಕ ಸಿ ಅಂಜಿನಪ್ಪ ಹಾಗೂ ಇತರರು ಉಪಸ್ಥಿತರಿದ್ದರು.