ಹಿಂದುಳಿದ ವರ್ಗಕ್ಕಾಗಿ ದುಡಿದವರು ನಮ್ಮ ದೇವರಾಜು ಅರಸು

ಚಿಕ್ಕಬಳ್ಳಾಪುರ,ಆ.೨೨-ಹಿಂದುಳಿದ ವರ್ಗಗಳು ಮತ್ತು ತಳ ಸಮುದಾಯಗಳ ನೋವು ಸಂಕಷ್ಟ,ಅಪಮಾನ ಮತ್ತು ಅವಶ್ಯಕತೆಗಳನ್ನು ತಳಸ್ಪರ್ಶಿಯಾಗಿ ಅರಿತು ಅವುಗಳಿಗೆ ಅತ್ಯಂತ ಪ್ರಾಮಾಣಿಕ ಸ್ಪಂದನೆಯನ್ನು ನೀಡಿದ ದೇವರಾಜ ಅರಸು ಅವರದ್ದು ಕರ್ನಾಟಕದ ಅಭಿವೃದ್ಧಿ ಮತ್ತು ಬದಲಾವಣೆಯಲ್ಲಿ ಮಹತ್ವದ ಪಾತ್ರ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು.
ಅವರು ಇಂದು ಚಿಕ್ಕಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಧೀಮಂತ ನೇತಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೦೮ ನೇ ಜಯಂತಿ ಕಾರ್ಯಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಮೇರಿಕಾದಲ್ಲಿ ಕಪ್ಪು ವರ್ಣೀಯರ ಮೇಲೆ ನಡೆದ ದೌರ್ಜನ್ಯ,ದಬ್ಬಾಳಿಕೆಗಳ ವಿರುದ್ಧ ಸೆಡ್ಡು ಹೊಡೆದು ಬಲ ತುಂಬಿದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ
ಹಾಗೂ ಭಾರತದಿಂದ ಬ್ರಿಟಿಷರನ್ನು ಓಡಿಸಲು ಅಹರ್ನಿಶಿ ಶ್ರಮಿಸಿದ ಧೀರೋದಾತ್ತ ನಾಯಕ ಮಹಾತ್ಮಗಾಂಧೀಜಿ ಮತ್ತು ಭಾರತದಲ್ಲಿ ಜಾತಿಪದ್ದತಿ, ಅಸಮಾನತೆ ಮತ್ತಿತರ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸಿದ ದೂರದೃಷ್ಟಿಯ ನಾಯಕ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಸಾಮಾಜಿಕ ನ್ಯಾಯದ ಹೋರಾಟಗಾರರ ಸಾಲಿನಲ್ಲಿ ನಿಲ್ಲುವಂತ ಹತ್ತಾರು ಶ್ರೇಷ್ಠ ಕೆಲಸಗಳನ್ನು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಹರಿಕಾರರೆಂದೇ ಹೆಸರಾದ ಡಿ.ದೇವರಾಜ ಅರಸು ಅವರು ಮಾಡಿ ಹೋಗಿದ್ದಾರೆ. ಅವರು ತಂದ ಜನಪರ ಯೋಜನೆಗಳು ಮತ್ತು ಕಾರ್ಯಕ್ರಮಗಳಿಂದಾಗಿ ಇಂದಿಗೂ ಅವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಪ್ರಾತಃ ಸ್ಮರಣೀಯ ರಾಜಕಾರಣಿಯಾಗಿದ್ದಾರೆ. ಭೂಸುಧಾರಣೆಯಂತಹ ಮಹತ್ವದ ಕಾಯಿದೆಯನ್ನು ಜಾರಿ ಮಾಡಿ ಬಡವರು ಮತ್ತು ಇಲ್ಲದವರ ಪರವಾಗಿ ನಿಂತು ಅವರಿಗೆ ಬಲ ತುಂಬಿದರು. ಅವರ ಉಳುವವನೇ ಭೂಮಿಯ ಒಡೆಯ ಎಂಬ ಘೋಷಣೆ ಇಂದಿಗೂ ಅತ್ಯಂತ ರೋಮಾಂಚಕಾರಿಯಾಗಿದೆ. ಏಕೆಂದರೆ, ಬಡವರು,ಅಸಹಾಯಕರು, ದೀನದಲಿತರೇ ಅವರ ಮೊದಲ ಆದ್ಯತೆಯಾಗಿದ್ದರು. ಅರಸು ಅವರು ತಮ್ಮ ಆಡಳಿತದ ಅವಧಿಯಲ್ಲಿ ಮಾಡಿದ ನಿಜ ಅರ್ಥದ ಜನಪರ ಕೆಲಸಗಳು ಇಂದಿಗೂ ಅಚ್ಚಳಿಯದೆ ಉಳಿದಿವೆ. ಅರಸು ಅವರೊಬ್ಬ ವಿಶಿಷ್ಟ ಮತ್ತು ಮಾದರಿ ವ್ಯಕ್ತಿತ್ವದ ರಾಜಕಾರಣಿ. ಅವರ ತತ್ವಾದರ್ಶಗಳು ಎಂದೆಂದಿಗೂ ಅನುಕರಣೀಯ ಎಂದು ಬಣ್ಣಿಸಿದರು.

.