ಹಿಂದುತ್ವ ಸಕ್ರಿಯ ಕಾರ್ಯಕರ್ತರ ಹತ್ಯೆ.
ರಕ್ಷಿಸುವಲ್ಲಿ ಸರ್ಕಾರ ವಿಫಲ – ಪಕ್ಷದ ಯುವಮೋರ್ಚಾ ಸಂಘಟಕರ ರಾಜೀನಾಮೆ ಪರ್ವ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 28 :- ರಾಜ್ಯದಲ್ಲಿ ಹಿಂದುತ್ವ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಪಕ್ಷದ ಸಂಘಟಕರು ಹಾಗೂ ಸಕ್ರಿಯ ಕಾರ್ಯಕರ್ತರ ಭೀಕರ ಹತ್ಯೆಯಾಗುತ್ತಿದ್ದರೂ ಕೊಲೆಗಾರರನ್ನು ಬಂಧಿಸುವಲ್ಲಿ ಹಾಗೂ ಕಾರ್ಯಕರ್ತರ ರಕ್ಷಿಸುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಮನನೊಂದ ವಿಜಯನಗರ ಜಿಲ್ಲೆಯ ಯುವಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಸೇರಿದಂತೆ ಕೂಡ್ಲಿಗಿ ಮಂಡಲದ ಬಿಜೆಪಿ ತಾಲೂಕು ಯುವಮೋರ್ಚಾ ಅಧ್ಯಕ್ಷ, ಪ್ರಧಾನಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಇಂದು ಮಧ್ಯಾಹ್ನ ಸಾಮೂಹಿಕ ರಾಜೀನಾಮೆ ಪತ್ರವನ್ನು ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ರವಾನಿಸಿದ್ದಾರೆ.
ಕಳೆದ ಕೆಲತಿಂಗಳ ಹಿಂದೆ ಶಿವಮೊಗ್ಗ ಹಾಗೂ ಕಳೆದೆರಡು ದಿನದ ಹಿಂದೆಯಷ್ಟೇ ಪ್ರವೀಣ್ ನಿಟ್ಟೂರ್ ಅವರು ಬಿಜೆಪಿ ಪಕ್ಷದ ಹಾಗೂ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದು ಅವರನ್ನು ಭೀಕರವಾಗಿ ಕೊಲೆ ಮಾಡಿ ಹತ್ಯೆಗೈದಿದ್ದು ಹಿಂದುತ್ವ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಂದುತ್ವ ಕಾರ್ಯಕರ್ತರ ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಅರಿತು ಕೂಡ್ಲಿಗಿ ಯುವಪಡೆಯ ಸಂಘಟನೆ ಮತ್ತು ಬಿಜೆಪಿ ಪಕ್ಷದ ಯುವಮೋರ್ಚಾ ಸಂಘಟನೆ ಪದಾಧಿಕಾರಿಗಳು ಇಂದು ಮಧ್ಯಾಹ್ನ ಕೂಡ್ಲಿಗಿ ಪ್ರವಾಸಿಮಂದಿರದಲ್ಲಿ ಸಭೆ ಸೇರಿ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಜಿಲ್ಲಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರವನ್ನು  ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿಗೆ ತಾಲೂಕು ಬಿಜೆಪಿ ಯುವಮೋರ್ಚಾಅಧ್ಯಕ್ಷ ವೀರೇಶ ಗುಳಿಗಿ, ಪ್ರಧಾನಕಾರ್ಯದರ್ಶಿ ಸಚಿನಕುಮಾರ ಹಾಗೂ ನಗರಘಟಕದ ಪದಾಧಿಕಾರಿಗಳು  ಸಲ್ಲಿಸಿದ್ದಾರೆ. ನಿನ್ನೆ ಸಹ ವಿಜಯನಗರ ಜಿಲ್ಲಾ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಹನುಮಂತಪ್ಪ ಶಿಂದೆ ಸಹ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆಂದು ತಿಳಿದಿದೆ. ತಾಲೂಕಿನಲ್ಲಿ ಬಿಜೆಪಿ ಸರ್ಕಾರದ ಆಡಳಿತ ವೈಖರಿ ಹಾಗೂ ಕಾರ್ಯಕರ್ತರ ರಕ್ಷಣೆಯಲ್ಲಿ ವಿಫಲವಾಗಿದೆ ಎಂಬ ಕೂಗು ಜೋರಾಗಿದ್ದು ಪಕ್ಷದ ಯುವಸಂಘಟಕರ ರಾಜೀನಾಮೆ ಪರ್ವ ಶುರುವಾಗಿದೆ ಎಂದು ಹೇಳಲಾಗುತ್ತಿದೆ