ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪಾರುಪತ್ಯ

ನವದೆಹಲಿ,ಡಿ.೩:ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗೆ ಸವಾಲಾಗಿ ಪರಿಣಮಿಸಿದ್ದ ಮಿನಿ ಮಹಾಸಮರದಲ್ಲಿ ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್‌ಘಡ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಬಿಜೆಪಿ ಪಾರುಪತ್ಯ ಮೆರದಿದೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷ ಕಾಂಗ್ರೆಸ್ ರೂಪಿಸಿದ್ದ ಎಲ್ಲ ಲೆಕ್ಕಾಚಾರಗಳು, ತಂತ್ರಗಳು ತಲೆಕೆಳಗಾಗಿದ್ದು, ಈ ಮೂರು ರಾಜ್ಯಗಳ ಚುನಾವಣೆಯಲ್ಲಿ ಸೋಲನುಭವಿಸಿದೆ.ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದ ಮಧ್ಯಪ್ರದೇಶದಲ್ಲಿ ಮಹಿಳಾ ಮತದಾರರು ಬಿಜೆಪಿಯ ಕೈ ಹಿಡಿದಿದ್ದಾರೆ. ಇದರಿಂದಾಗಿಯೇ ಈ ಬಾರಿಯ ಚುನಾವಣೆಯಲ್ಲಿ ಶಿವರಾಜ್‌ಸಿಂಗ್ ಚೌಹಾಣ್ ಅಧಿಕಾರ ಉಳಿಸಿಕೊಳ್ಳಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ.ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಪ್ರಕಟಿಸಿದ್ದು, ಇದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮ್ಯಪ್ರದೇಶದಲ್ಲೂ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಲಾಡ್ಲಿ ಬೆಹನಾ ಹೆಸರಿನಲ್ಲಿ ಯೋಜನೆ ಆರಂಭಿಸಿತು. ಹೀಗಾಗಿಯೇ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಅನುಕೂಲವಾಯಿತು.
ಕಾಂಗ್ರೆಸ್ ಪಕ್ಷ ಈ ಯೋಜನೆಯನ್ನು ಚುನಾವಣಾ ಗಿಮಿಕ್ ಎಂದು ಲೇವಡಿ ಮಾಡಿತ್ತು. ಮಧ್ಯಪ್ರದೇಶ ಸರ್ಕಾರ ಬಡ ಮಹಿಳೆಯರಿಗೆ ಪ್ರತಿ ತಿಂಗಳು ೧,೨೫೦ ರೂ. ನೀಡಿದ್ದರೆ, ಪಿಎಂ ಉಜ್ವಲ ಯೋಜನೆಯಡಿ ಸಿಲಿಂಡರ್‌ಗೆ ೪೫೦ ರೂ. ನೀಡುವುದಾಗಿ ಭರವಸೆ ನೀಡಿತ್ತು. ಈ ಎಲ್ಲ ಕಾರನಗಳಿಂದಾಗಿ ಬಿಜೆಪಿಗೆ ಮತ್ತೆ ವಿಜಯಲಕ್ಷ್ಮಿ ಒಲಿದಿದ್ದಾಳೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೧೧೪, ಬಿಜೆಪಿ ೧೦೯, ಬಿಎಸ್‌ಪಿ, ಸಮಾಜವಾದಿ ಪಕ್ಷ ೧, ಹಾಗೂ ೪ ಮಂದಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ಬಿಎಸ್‌ಪಿ, ಅಸ್ಪಿ ಮತ್ತು ಪಕ್ಷೇತರ ಶಾಸಕರ ಬೆಂಬಲದಿಂದಾಗಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಕಮಲ್‌ನಾಥ್ ಮುಖ್ಯಮಂತ್ರಿಯಾಗಿದ್ದರು.
ಆಪರೇಷನ್ ಕಮಲದ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತ್ತು.ಬಿಜೆಪಿ ಜಯರಿ ಬಾರಿಸುತ್ತಿದ್ದಂತೆ ರಾಜಧಾನಿ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಇದರ ಬೆನ್ನಲ್ಲೆ ಸರ್ಕಾರ ರಚನೆಗೆ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ನಾಯಕರು ಸಭೆ ನಡೆಸಿ ಸಮಾಲೋಚನೆ ನಡೆಸಿದರು.ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಸೇರಿದಂತೆ ಬಿಜೆಪಿ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.ರಾಜಸ್ತಾನದಲ್ಲೂ ಕಮಲ ಅರಳಿದೆ. ಆಡಳಿತ ವಿರೋಧಿ ಅಲೆ ಹಾಗೂ ಆಂತರಿಕ ಕಚ್ಚಾಟದಿಂದ ಮುಖ್ಯಮಂತ್ರಿ ಗೆಲ್ಹೋಟ್ ಸರ್ಕಾರ ಅಧಿಕಾರ ಕಳೆದುಕೊಂಡಿದೆ. ಈ ಹಿಂದಿನ ಫಲಿತಾಂಶವನ್ನು ಅವಲೋಕಿಸಿದರೆ ರಾಜಸ್ತಾನದಲ್ಲಿ ಒಂದು ಬಾರಿ ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿಗೆ ಮತದಾರ ಅಧಿಕಾರದ ಚುಕ್ಕಾಣಿ ನೀಡಿದ್ದಾನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗಿದ್ದು, ಮತದಾರ ಬಿಜೆಪಿಗೆ ಅವಕಾಶ ನೀಡಿದ್ದಾನೆ.
ರಾಜಸ್ತಾನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಕೇಂದ್ರದ ಸಚಿವರು ಮತ್ತು ಸಂಸದರಿಗೆ ಟಿಕೇಟ್ ನೀಡಿತ್ತು, ಈ ತಂತ್ರಗಾರಿಕೆ ಚುನಾವಣೆಯಲ್ಲಿ ಫಲಪ್ರದವಾಗಿದೆ.
ಕಾಂಗ್ರೆಸ್ ತಿರಸ್ಕಾರ.ಸುಳ್ಳು ಭರವಸೆಯನ್ನು ನೀಡಿದ ಕಾಂಗ್ರೆಸ್ ಪಕ್ಷವನ್ನು ಮತದಾರರು ಈ ಬಾರಿಯ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ ಎಂದು ರಾಜಸ್ತಾನ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ್‌ಜೋಷಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ರಾಜ್ಯ ಹೊರತುಪಡಿಸಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಬಿಜೆಪಿಯ ಹಿರಿಯ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದರಿಂದ ರಾಜಸ್ತಾನದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಮಧ್ಯಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದೆ ಎಂದು ಹೇಳಿದರು.ಛತ್ತೀಸ್‌ಘಡ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಕಮಾಲ್ ಮಾಡಿದೆ. ಮತ ಎಣಿಕೆ ಆರಂಭವಾದಾಗಿನಿಂದ ಕಡೆ ಘಳಿಗೆಯವರೆಗೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಕಂಡು ಬಂದಿತ್ತು. ಒಂದು ಬಾರಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡರೆ, ಮತ್ತೊಮ್ಮೆ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುತ್ತಿತ್ತು, ಹೀಗೆ ಹಾವು-ಏಣಿ ಆಟ ಮುಂದುವರೆದಿತ್ತು. ಅಂತಿಮವಾಗಿ ಬಿಜೆಪಿ ಗೆಲುವಿನ ನಗೆ ಬೀರುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಅಧಿಕಾರವನ್ನು ಕಿತ್ತುಕೊಂಡಿತು.
ಈ ರಾಜ್ಯದಲ್ಲೂ ಆಡಳಿತ ವಿರೋಧಿ ಅಲೆ ಕಂಡು ಬಂದಿದ್ದು, ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿತ್ತು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರ ಕಮಲಕ್ಕೆ ಆರ್ಶೀವಾದ ಮಾಡಿದ್ದಾನೆ.