ಹಿಂದಿ ದಿವಸ ಆಚರಣೆ ರದ್ಧಿಗೆ ಕರವೇ ಪ್ರತಿಭಟನೆ

ರಾಯಚೂರು, ಸೆ.೧೪- ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ, ಭಾರತದ ಐಕ್ಯತೆಯನ್ನು ಒಡೆಯುತ್ತಿರುವ ಹಿಂದಿ ದಿವಸ ಆಚರಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣೆ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಭಾರತ ಒಕ್ಕೂಟ ಸರ್ಕಾರವು ಪ್ರತಿವರ್ಷ ಸೆಪ್ಟೆಂಬರ್ ೧೪ ರಂದು ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಣೆ ನಡೆಸುತ್ತ ಬಂದಿದೆ. ಕೇವಲ ಹಿಂದಿ ದಿವಸವೊಂದನ್ನು ಆಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಿ, ಹಿಂದಿಯೊಂದನ್ನೇ ಪ್ರತಿವರ್ಷ ಮೆರೆಸುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಇದನ್ನು ಕಳೆದ ಎರಡು ದಶಕಗಳಿಂದ ತೀವ್ರವಾಗಿ ವಿರೋಧಿಸುತ್ತ ಬಂದಿದೆ. ಈ ವರ್ಷವೂ ಸಹ ಸೆಪ್ಟೆಂಬರ್ ೧೪ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೧೯೫೦ರಲ್ಲಿ ಜಾರಿಗೊಳಿಸಲಾದ ಸಂವಿಧಾನದ ಭಾಗ ೧೭ರಲ್ಲಿ ೩೪೩-೩೫೧ನೆಯ ವಿಧಿಗಳಲ್ಲಿ ಭಾರತದ ಭಾಷಾ ನೀತಿಯನ್ನು ಬರೆಯಲಾಗಿದೆ. ಭಾರತ ಸರ್ಕಾರವು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಗಳನ್ನಾಗಿ ಮಾಡಿಕೊಂಡಿರುವುದು ಖಂಡನೀಯ ಎಂದರು.
ಭಾರತಕ್ಕೆ ಯಾವುದೇ ಒಂದು ರಾಷ್ಟ್ರಭಾಷೆ ಇರುವುದಿಲ್ಲ. ಸಂವಿಧಾನದ ೮ನೇ ಪರಿಚ್ಛೇದದಲ್ಲಿರುವ ಎಲ್ಲ ೨೨ ಭಾಷೆಗಳೂ ದೇಶದ ರಾಷ್ಟ್ರೀಯ ಭಾಷೆಗಳೇ ಆಗಿವೆ. ಈ ಭಾಷೆಗಳ ನಡುವೆ ತಾರತಮ್ಯ ಎಸಗಿದರೆ, ಅದು ಸಂವಿಧಾನವೇ ಹೇಳುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿರುತ್ತದೆ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಇಪ್ಪತ್ತೆರಡು ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಈ ಅವಕಾಶ ಈಗಾಗಲೇ ಇದ್ದು, ಅದನ್ನು ಎಲ್ಲಾ ಭಾಷೆಗಳಿಗೆ ವಿಸ್ತರಿಸಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ, ಹಕ್ಕುಗಳು ಇರಬೇಕು. ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾದಂಥ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಪ್ರತಿವರ್ಷ ಸೆಪ್ಟೆಂಬರ್ ೧೪ರ ಹಿಂದಿ ದಿನಾಚರಣೆ ಕೊನೆಯಾಗಬೇಕು. ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡಬಾರದು, ಯಾವ ಭಾಷೆಯನ್ನೂ ನಿರ್ಲಕ್ಷಿಸಕೂಡದು.
ಈ ಸಂದರ್ಭದಲ್ಲಿ ವಿನೋದರೆಡ್ಡಿ.ಎಂ.ಸಂಘದ ಕಾರ್ಯಕರ್ತರು ಇದ್ದರು.