ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

ಕಲಬುರಗಿ.ಸೆ.14: ಹಿಂದಿ ದಿವಸ್ ಆಚರಣೆಯನ್ನು ಮಾಡಬಾರದು ಎಂದು ಆಗ್ರಹಿಸಿ ಜಾತ್ಯಾತೀತ ಜನತಾದಳದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಹಿಂದಿ ದಿವಸ್ ಆಚರಣೆಯನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ನಾವು ಕನ್ನಡಿಗರು. ನಮ್ಮ ಮಾತೃಭಾಷೆ ಮತ್ತು ನಮ್ಮ ಆರು ಕೋಟಿ ಕನ್ನಡಿಗರ ಹೆಮ್ಮೆಯ ಭಾಷೆ. ಹೀಗಿರುವಾಗ ನಾವು ಹಿಂದಿ ದಿವಸ್ ಆಚರಣೆ ಮಾಡುವುದಿಲ್ಲ. ನಾವು ಒಪ್ಪುವುದಿಲ್ಲ ಎಂದು ಅವರು ವಿರೋಧಿಸಿದರು.
ದೇಶದ ಸಾವಿರಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತ ಬಂದಿದೆ. 400 ವರ್ಷಗಳ ಇತಿಹಾಸವಿರುವ ಕನ್ನಡ ನೆನಪಿಗೂ ಬರುವುದಿಲ್ಲ. ಕರ್ನಾಟಕ ರಾಜ್ಯವು ಕನ್ನಡ, ಕೊಂಕಣಿ, ತುಳು, ಕೊಡವ ಸೇರಿದಂತೆ ಹತ್ತಾರು ಭಾಷೆಗಳ ತವರೂರು. ವೈವಿಧ್ಯಮಯ ಸಂಸ್ಕøತಿ ಹೊಂದಿರುವ ರಾಜ್ಯವು ಒಂದು ಅದ್ಭುತ ಪ್ರಪಂಚ. ಇಂತಹ ಪುಣ್ಯ ಭೂಮಿಯಲ್ಲಿ ನಮಗೆ ಸಂಬಂಧವೇ ಇಲ್ಲದ ಭಾಷೆಯ ಆಚರಣೆ ಘೋರ ಅನ್ಯಾಯ. ಹಿಂದಿ ದಿವಸ್ ಹಿಂದಿ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರಲಿ. ನಮಗೆ ಅದರ ಅವಶ್ಯವಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.
ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತ ಬಂದಿದ್ದಾರೆ. ಈಗಲೂ ಸಹ ಬಲವಂತದ ಹೇರಿಕೆಯನ್ನು ವಿರೋಧಿಸುತ್ತಿದ್ದಾರೆ. ಆದ್ದರಿಂದ ಹಿಂದಿ ದಿವಸ್ ಆಚರಣೆಯಲ್ಲಿ ಪಾಲ್ಗೊಳ್ಳದಂತೆ ಹಾಗೂ ಬೆಂಬಲಿಸದಂತೆ ಅವರು ಒತ್ತಾಯಿಸಿದರು.
ಪಕ್ಷದ ನೂತನ ಜಿಲ್ಲಾಧ್ಯಕ್ಷ ಸುರೇಶ್ ಎಮ್. ಮಹಾಗಾಂವಕರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಾದೇವಿ ಕೆಸರಟಗಿ, ವಳಕೇರಿ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.