ಹಿಂದಿ ದಿವಸ್ ಕೊನೆಗೊಳಿಸಿ ಎಲ್ಲ 22 ಭಾಷೆಗಳಿಗೆ ಆಡಳಿತ ಭಾಷೆ ಮಾನ್ಯತೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ.ಸೆ.14: ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು 8ನೇ ಪರಿಚ್ಛೇದದಲ್ಲಿ ಇರುವ ಎಲ್ಲ 22 ಭಾಷೆಗಳನ್ನು ಆಡಳಿತ ಭಾಷೆಯನ್ನಾಗಿ ಮಾಡುವಂತೆ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಿಗೆ ಈ ಅವಕಾಶ ಇದ್ದು, ಅದನ್ನು ಎಲ್ಲ ಭಾಷೆಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಎಲ್ಲ ಭಾಷೆಗಳಿಗೆ ಸಮಾನ ಅವಕಾಶಗಳನ್ನು ಕೊಡುವಂತೆ, ಹಿಂದಿ ದಿವಸಕ್ಕೆ ಕೊನೆಯಾಗಬೇಕು. ಆ ಹಿನ್ನೆಲೆಯಲ್ಲಿ ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ಕೊಡಬಾರದು. ಯಾವುದೇ ಭಾಷೆಯನ್ನೂ ನಿರ್ಲಕ್ಷಿಸಬಾರದು ಎಂದು ಅವರು ಆಗ್ರಹಿಸಿದರು.
ಅಧಿಕೃತ ಭಾಷಾ ಕಾಯ್ದೆಯ ಹೆಸರಿನಲ್ಲಿ ಹಿಂದಿಯೇತರ ಭಾರತೀಯರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಕಾರ್ಯಕ್ರಮಗಳು ಜಾರಿಯಲ್ಲಿವೆ. ಇದು ಇಂದಿಗೂ ಮುಂದುವರೆದಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಕ್ವಾಡದ ಹೆಸರಿನಲ್ಲಿ ಭಾರತದ ತೆರಿಗೆಯ ಹಣದಿಂದ ಹಿಂದಿಯೇತರ ರಾಜ್ಯದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಹಿಂದಿ ಪರವಾದ ನೀತಿಗಳಿಂದಾಗಿ, ಹಿಂದಿ ಭಾಷಿಕರು ಇತರೆ ಭಾಷಿಕರಿಗಿಂತ ಶಿಕ್ಷಣ, ಉದ್ಯೋಗದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿ ಆದ್ಯತೆ, ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಒಬ್ಬ ಕನ್ನಡಿಗ ಇಲ್ಲವೇ ಒಬ್ಬ ಮಲಯಾಳಿ ಅಥವಾ ಇನ್ನಾವುದೇ ಭಾಷೆಗಳ ಜನರಿಗೆ ಬೇರೆ, ಬೇರೆ ರಾಜ್ಯಗಳಲ್ಲಿ ತಮ್ಮ ಭಾಷೆಗಳಲ್ಲಿ ಸೇವೆ ಲಭಿಸುವುದಿಲ್ಲ. ಇಂತಹ ತಾರತಮ್ಯಗಳು ಒಕ್ಕೂಟದ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತವೆ. ಕೇಂದ್ರ ಸರ್ಕಾರದ ಅಸಮಾನತೆಯ ಭಾಷಾ ನೀತಿಯಿಂದಾಗಿ ಇಂತಹ ತಾರತಮ್ಯ ಆಗುತ್ತಿದೆ. ಇದರ ವಿರುದ್ಧ ಮೊದಲಿನಿಂದಲೂ ಹಲವು ರಾಜ್ಯಗಳ ಜನರು, ವಿಶೇಷವಾಗಿ ದಕ್ಷಿಣ ಭಾರತೀಯರು ಪ್ರತಿಭಟಿಸುತ್ತಿದ್ದಾರೆ. ಈ ಅಸಮಾನತೆಯನ್ನು ತೊಡೆದು ಹಾಕಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಮಹೇಶ್ ಎಸ್. ಕಾಶಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆನಂದ್ ಎಸ್. ದೊಡ್ಡಮನಿ, ಮಲ್ಲಿಕಾರ್ಜುನ್ ಅಲ್ಲುರಕರ್, ರಾಜಕುಮಾರ್ ಉಕ್ಕಲಿ ಮುಂತಾದವರು ಪಾಲ್ಗೊಂಡಿದ್ದರು.