ಹಿಂದಿ ದಿವಸ್ ಆಚರಣೆ ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.14: ಹಿಂದಿ ದಿವಸ್ ಆಚರಣೆ ಸರ್ಕಾರದ ಕ್ರಮ ಖಂಡಿಸಿ ಇಲ್ಲಿನ ಜೆಡಿಎಸ್ ನೂರಾರು ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ,  ನಗರದ ಜೆಡಿಎಸ್ ಜಿಲ್ಲಾ ಕಚೇರಿಯಿಂದ ಪ್ರಾರಂಭಗೊಂಡು, ಮೀನಾಕ್ಷಿ ಸರ್ಕಲ್ ಮೂಲಕ ಡಿ.ಸಿ.ಕಚೇರಿ ವರೆಗೆ ನಡೆಯಿತು. ಈ ವೇಳೆ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಸರ್ಕಾರ ಆಚರಿಸಲು ಮುಂದಾದ ಹಿಂದಿ ದಿವಸ್ ಆಚರಣೆ ಖಂಡಿಸಿ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಮಾತನಾಡಿ, ಹಿಂದಿ ದಿವಸ್ ಆಚರಣೆಯನ್ನು ಸರ್ಕಾರ ಕೂಡಲೇ ಕೈ ಬಿಡಬೇಕು, ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಭಾರತವು ಸಾ«ರಾರು ಭಾಷೆ ಹಾಗೂ ಉಪ ಭಾಷೆಗಳನ್ನು ಒಳಗೊಂಡಿದೆ, ಸುಮಾರು 560ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಹಾಗೂ ಸಾಮಾಜಿಕ ಸಾಂಸ್ಕೃತಿಕವಾಗಿ ಭಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಒಕ್ಕೂಟವಾಗಿದೆ. ಇಂತಹ ನಾಡಲ್ಲಿ ಕೇವಲ ಒಂದೇ ಭಾಷೆಯನ್ನು ವೈಭವೀಕರಿಸುವುದು, ಪ್ರಾಧಾನ್ಯತೆ ನೀಡುವುದು, ನಿಜಕ್ಕೂ ದೊಡ್ಡ ದುರಂತ, 400 ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಇವರಿಗೆ 2500 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವು ಸರ್ಕಾರಕ್ಕೆ ನೆನಪಾಗುತ್ತಿಲ್ಲ, ಸರ್ಕಾರಗಳ ಕುತಂತ್ರದಿಂದ ಸೆ.14ರಂದು ಹಿಂದಿ ದಿವಸ್ ಎಂಬ ಆಚರಣೆಯನ್ನು ಸೃಷ್ಟಿಸಿ ದೇಶದ ಸಾವಿರಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಜಿಲ್ಲಾ ಮಹಾ ಪ್ರದಾನ ಕಾರ್ಯದರ್ಶಿ ಹುಲಗಪ್ಪ ತಳವಾರ್ ಅವರು ಮಾತನಾಡಿ, ಸೆ.14 ರಂದು ಭಾರತ ಒಕ್ಕೂಟ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾದ ಹಿಂದಿ ದಿವಸ್ ಆಚರಣೆಯನ್ನು ರಾಜ್ಯದಲ್ಲಿ ಒತ್ತಾಯ ಪೂರ್ವಕವಾಗಿ ಆಚರಿಸುವುದು ಸರಿಯಲ್ಲ, ಸರ್ಕಾರ ನಮ್ಮ ನಾಡಿನ ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ. ರಾಜ್ಯ ಸರ್ಕಾರದ ವತಿಯಿಂದ ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ದಿವಸ್ ಆಚರಣೆಯನ್ನು ಮಾಡಕೂಡದು, ಸರ್ಕಾರ ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವೈ.ಗೋಪಾಲ್, ಅದ್ದಿಗೇರಿ ರಾಮಣ್ಣ, ಹೊನ್ನೂರ್ ಸ್ವಾಮೀ, ರಸೂಲ್ ಸಾಬ್, ಬಂಡೇಗೌಡ, ಯಲ್ಲನಗೌಡ, ಅಮಿನಾ, ಡಿ.ವಿಜಯಕುಮಾರ್, ವಿಜಯಕುಮಾರ್ ಗೌಡ, ಭವಾನಿ, ಯಶೋಧಾ, ರಾಮಾಂಜಿನೇಯಲು, ಚಾಗನೂರ್ ನಾಗರಾಜ್, ಬಸಪ್ಪ, ಹಾಜಿ ಬಾಬಾ ಖಾನ್, ಚರಕುಂಟೆ ಈರಣ್ಣ, ಕಿರಣ್ ಕುಮಾರ್, ನೂರ್, ಜಾವೇದ್, ಸಂಜೀವರಾಯನ ಕೋಟೆ ಕುಮಾರ್, ಮಹ್ಮದ್ ಇಕ್ಬಾಲ್, ರಾಘವೇಂದ್ರ, ಪುಷ್ಪಾ, ಲಕ್ಷ್ಮೀಕಾಂತರೆಡ್ಡಿ, ರುದ್ರಮುನಿ, ಲಾಲ್ ಸ್ವಾಮಿ, ಭಾವಿ ಶಿವಕುಮಾರ್, ಜಯಲಕ್ಷ್ಮೀ, ಕುಮಾರಿ, ಗೌಸಿಯಾ, ಉಷಾ,ವರಲಕ್ಷ್ಮೀ, ಮುಂತಾಜ್, ವಲಿಬಾಯಿ, ದಾದು,ಶಹಿಜಾದಿ, ರುಮಾನಾ ಸೇರಿದಂತೆ ಪಕ್ಷದ ವಿವಿಧ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.