ಹಿಂದಿ ದಿವಸ್ ಆಚರಣೆಗೆ ಜೆಡಿಎಸ್ ವಿರೋಧ

ಬೆಂಗಳೂರು, ಸೆ. ೧೪- ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆಗೆ ಜೆಡಿಎಸ್‌ನ ವಿರೋಧವಿದ್ದು, ನಮ್ಮ ತಾಯಿ,ನಮ್ಮ ನಾಡು, ನಮ್ಮ ಭಾಷೆ ಕನ್ನಡ. ಹಿಂದಿ ದಿಲ್ಲಿ ಭಾಷೆ, ಹೈಕಮಾಂಡ್ ಗುಲಾಮಗಿರಿ ಇಲ್ಲಿ ನಡೆಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಭಾಷೆ ಬಸವಕೃಪ, ಹಿಂದಿಭಾಷೆ ಕೇಶವಕೃಪ, ಕೇಶವಕೃಪ ಪದ ಹಿಂದಿ ಆಚರಣೆಯನ್ನು ದಿಲ್ಲಿಯಲ್ಲಿ ಮಾಡಲಿ. ರಾಜ್ಯದಲ್ಲಿ ಅಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಕನ್ನಡದ ದುಡ್ಡನ್ನು ಬಳಸಿಕೊಂಡು ಹಿಂದಿ ಅವ್ವನ ಆಚರಣೆ ಮಾಡಲು ಹೊರಟಿದ್ದಾರೆ ಇದು ಸರಿಯಲ್ಲ. ನಮ್ಮದು ಅಪ್ಪಾಜಿ, ಪಿತಾಜಿ ಸಂಸ್ಕೃತಿಯಲ್ಲ. ಅವ್ವ-ಅಪ್ಪನ ಸಂಸ್ಕೃತಿ ಎಂದರು.
ಹಿಂದಿ ದಿವಸ್ ಆಚರಣೆ ವಿರೋಧಿಸಿ ಜೆಡಿಎಸ್ ಇಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದೆ ಎಂದರು.
ಹಿಂದಿ ಕಲಿಯಬೇಡಿ ಎಂದು ಹೇಳಿಲ್ಲ. ಹೇರಿಕೆ ಬೇಡ. ಮೊದಲು ಅವ್ವನ ನೋಡಲಿ, ಆಮೇಲೆ ಉಳಿದಿದ್ದು. ಕನ್ನಡಿಗರು ಹೊಟ್ಟೆಪಾಡಿಗಾಗಿ ಬೇರೆ ರಾಜ್ಯಗಳಿಗ ಹೋಗುವುದು ಕಡಿಮೆ ಹಿಂದಿಯವರೇ ರಾಜ್ಯಕ್ಕೆ ಪಾನಿಪೂರಿ, ಖರ್ಚಿಫ್ ಮಾರಲು ಬರುತ್ತಿದ್ದಾರೆ ಎಂದರು.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗುಲಾಮಗಿರಿಯ ಪಕ್ಷಗಳು. ಸೋನಿಯಾಗಾಂಧಿ, ರಾಹುಲ್‌ಗಾಂಧಿ ಗಪ್‌ಚುಪ್ ಎಂದರೆ ಕಾಂಗ್ರೆಸ್‌ನವರು ಖಲಾಸ್ ಎನ್ನುತ್ತಾರೆ. ಬಿಜೆಪಿಯವರದ್ದು ಬೈಟಾಕ್. ಇದು ಬೈಟಾಕ್ ಸರ್ಕಾರ ಎಂದು ಟೀಕಿಸಿದರು.
ರಾಜ್ಯದ ಕನ್ನಡಿಗರ ತೆರಿಗೆ ದುಡ್ಡನ್ನು ಹಿಂದಿ ಭಾಷೆಗೆ ಖರ್ಚು ಮಾಡುವುದನ್ನು ಬಿಟ್ಟು ಕನ್ನಡದ ಅವ್ವನಿಗೆ ಖರ್ಚು ಮಾಡಿ. ಕನ್ನಡದಲ್ಲಿ ಇನ್ನೂ ಸಂಪೂರ್ಣ ನಿಘಂಟು ಬಂದಿಲ್ಲ. ಮೊದಲು ಆ ಕೆಲಸ ಮಾಡಿ. ಜೆಡಿಎಸ್ ಸರ್ಕಾರ ಬಂದರೆ ಕನ್ನಡದ ನಿಘಂಟನ್ನು ಹೊರತರುವ ಕೆಲಸ ಮಾಡಲಿದೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.
ಭಾರತ ಜನನಿಯ ತನುಜಾತೆ, ಜಯಯೇ ಕರ್ನಾಟಕ ಮಾತೆ ಎಂದು ಕುವೆಂಪು ಹಾಡಿದ್ದಾರೆ. ಬಸವಾದಿ ಶರಣರು, ಕುವೆಂಪು, ಕನಕದಾಸರು ಎಲ್ಲರದ್ದೂ ಕನ್ನಡ ಭಾಷೆ. ಹಾಗಾಗಿ ನಮ್ಮ ಭಾಷೆ ನಮಗೆ ಮುಖ್ಯ ಎಂದು ಅವರು ಹೇಳಿದರು.