ಹಿಂದಿ ಆತ್ಮೀಯ ಭಾಷೆ

ಕಲಬುರಗಿ:ಜ,10: ನಮ್ಮ ದೇಶದ ರಾಷ್ಟ್ರೀಯ ಭಾಷೆಯಾದ ಹಿಂದಿಯು ಎಲ್ಲರಿಗೂ ಆತ್ಮೀಯ ಭಾಷೆಯಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಾಜಭಾಷಾ ವಿಭಾಗದ ಸಹ ನಿರ್ದೇಶಕರಾದ ಡಾ.ರೇಷ್ಮಾ ನದಾಫ್ ಅಭಿಪ್ರಾಯ ಪಟ್ಟರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಿಂದಿ ವಿಭಾಗದ ಅಡಿಯಲ್ಲಿ ವಿಶ್ವ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು, ವಿಶ್ವದ ಅತಿಹೆಚ್ಚು ಮಾತನಾಡುವ ಭಾಷೆಯಲ್ಲಿ ಹಿಂದಿ ಮೂರನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ಸುಮಾರು 25-30 ಕೋಟಿಗೂ ಹೆಚ್ಚು ಜನ ಹಿಂದಿ ಮಾತನಾಡುತ್ತಾರೆ. ಎಲ್ಲರೂ ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಇದರಿಂದ ಸಂಪರ್ಕಕ್ಕೆ ತೊಂದರೆ ಇಲ್ಲ. ಮೆಡಿಕಲ್, ಇಂಜಿನಿಯರಿಂಗ್ ಪುಸ್ತಕಗಳು ಹಿಂದಿ ಭಾಷೆಯಲ್ಲಿ ಬರುತ್ತಿವೆ ಇದರಿಂದ ತಿಳಿಯಲು ಸುಗಮವಾಗುತ್ತದೆ. ವಿದ್ಯಾರ್ಥಿನಿಯರು ಪ್ರಾದೇಶಿಕ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಓದಲು ಮತ್ತು ಬರೆಯಲು ಕಲಿಯಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸುರ ಮಾತನಾಡಿ, ಪೂಜ್ಯ ಡಾ.ಅಪ್ಪಾಜಿಯವರು ಹಿಂದಿ ಭಾಷೆ ಬೆಳೆಸಿದ್ದಾರೆ. ನಮ್ಮ ಕನ್ನಡ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಪ್ರೀತಿಸಬೇಕು. ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲೂ ಹಿಂದಿ ಭಾಷೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಸಬೇಕಾಗಿದೆ ಎಂದರು.

ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ, ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ ವೇದಿಕೆಯಲ್ಲಿದ್ದರು. ವಿಭಾಗದ ಮುಖ್ಯಸ್ಥೆ ಶ್ರೀಮತಿ ಕಲ್ಪನಾ ಡಿ.ಮಹೇಂದ್ರಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರೆ, ಕೃಪಾಸಾಗರ ಗೊಬ್ಬುರ ನಿರೂಪಿಸಿ, ವಂದಿಸಿದರು. ಕು.ಸ್ವಾತಿ ಪ್ರಾರ್ಥಿಸಿದರು.

ಮಹಾವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.