ಹಿಂದಿನ ಫಲಿತಾಂಶ ಆಧರಿಸಿ ಸಿಬಿಎಸ್‌ಇ 12ನೇ ತರಗತಿ ಅಂಕ

ನವದೆಹಲಿ, ಮೇ ೩೦- ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಒಂದು ವೇಳೆ ಸಿಬಿಎಸ್‌ಇ ೧೨ನೇ ತರಗತಿಯ ಪರೀಕ್ಷೆಗಳು ರದ್ದುಗೊಂಡರೆ ೯, ೧೦ ಮತ್ತು ೧೧ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಫಲಿತಾಂಶದ ಆಧಾರದ ಮೇಲೆ ಅಂಕಗಳನ್ನು ನೀಡುವ ಬಗ್ಗೆ ಶಿಕ್ಷಣ ಇಲಾಖೆ ಪ್ರಸ್ತಾಪವೊಂದನ್ನು ಮುಂದಿಟ್ಟಿದೆ.
ಒಂದು ವೇಳೆ ಪರೀಕ್ಷೆಯನ್ನು ವಿದ್ಯಾರ್ಥಿಗಳ ದೃಷ್ಟಿಯಿಂದ ಪರೀಕ್ಷೆ ಆಯ್ಕೆಯನ್ನು ರದ್ದುಗೊಳಿಸುವ ಪ್ರಸ್ತಾಪಕ್ಕೆ ಕೆಲವು ರಾಜ್ಯಗಳು ಸಹಮತ ವ್ಯಕ್ತಪಡಿಸಲಿಲ್ಲ. ಆದರೆ, ಪರೀಕ್ಷೆ ನಡೆಸುವ ಮುನ್ನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮೊದಲನೇ ಡೋಸ್ ಲಸಿಕೆಯನ್ನು ನೀಡಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದವು.
ಮತ್ತೊಂದೆಡೆ ೧೨ನೇ ತರಗತಿ ವಿದ್ಯಾರ್ಥಿಗಳು ಸಿಬಿಎಸ್‌ಇ ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಕೋರಿ
ಟ್ವಿಟರ್ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಆದರೆ ಮೂರು ವರ್ಷಗಳ ಹಿಂದೆ ವಿದ್ಯಾರ್ಥಿಗಳು ಪಡೆದಿರುವ ಫಲಿತಾಂಶದ ಆಧಾರದ ಮೇಲೆ ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡುವ ಪ್ರಸ್ತಾಪ ಕೇಳಿ ಬಂದ ಕೆಲವೇ ನಿಮಿಷಗಳಲ್ಲಿ ಟ್ವಿಟರ್‌ನಲ್ಲಿ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದ ವಿದ್ಯಾರ್ಥಿಗಳು ಎದನ್ನು ತೆಗೆದು ಹಾಕಿದ್ದಾರೆ.
ಸಿಬಿಎಸ್‌ಇ ಪರೀಕ್ಷೆ ನಡೆಸುವ ಸಂಬಂಧ ಕೇಂದ್ರ ಸರ್ಕಾರ ಮೇ ೨೧ ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರ ಸಭೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ನೇತೃತ್ವದಲ್ಲಿ ನಡೆಸಲಾಗಿತ್ತು.
ಈ ಸಭೆಯಲ್ಲಿ ಬಹುತೇಕ ರಾಜ್ಯಗಳು ಪರೀಕ್ಷೆ ನಡೆಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದವು. ಈ ವೇಳೆ ಎ ಮತ್ತು ಬಿ ಆಯ್ಕೆಯನ್ನು ಪ್ರಸ್ತಾಪವನ್ನು ಮುಂದಿಟ್ಟಿದ್ದವು.
ಎ ಪ್ರಸ್ತಾಪದಲ್ಲಿ ೧೯ ಪ್ರಮುಖ ವಿಷಯಗಳಿಗೆ ಎಂದಿನಂತೆ ಪರೀಕ್ಷೆ ನಡೆಸುವುದು, ಬಿ ಆಯ್ಕೆಯಲ್ಲಿ ಪರೀಕ್ಷೆಯ ಅವಧಿಯನ್ನು ಒಂದೂವರೆ ತಾಸುಗಳಿಗೆ ಮೊಟಕುಗೊಳಿಸಿ, ಆಯಾ ಶಾಲೆಗಳಲ್ಲೇ ಜು. ೧೫ ರಿಂದ ಆ. ೨೬ರವರೆಗೆ ೨ ಹಂತಗಳಲ್ಲಿ ಪರೀಕ್ಷೆ ನಡೆಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದವು.
ಆದರೆ, ಮೇ ೨೫ ರೊಳಗೆ ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಕ್ರಿಯಾಲ್ ಸೂಚಿಸಿದ್ದರು. ಅದರಂತೆ ಎಲ್ಲ ರಾಜ್ಯಗಳು ಪರೀಕ್ಷೆ ನಡೆಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದವು.
ಜೂ. ೧ ರೊಳಗೆ ಸಿಬಿಎಸ್‌ಇ ೧೨ನೇ ತರಗತಿಗೆ ಪರೀಕ್ಷೆ ನಡೆಸಬೇಕೆಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ಪರೀಕ್ಷೆ ರದ್ದುಪಡಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಾಳೆ ನಡೆಯಲಿದೆ.