ಹಿಂದಿನ ದಾಖಲೆಗಳ ಸಡಿಲಿಕೆಯೊಂದಿಗೆ ಪ್ರಾಯೋಗಿಕವಾಗಿ ಇ-ಸ್ವತ್ತು ವಿತರಿಸಿ ಬಡವರಿಗೆ ಅನುಕೂಲ ಕಲ್ಪಸಿ; ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್

ಸಂಜೆವಾಣಿ ವಾರ್ತೆ

ದಾವಣಗೆರೆ,ಫೆ.೧೪; ದಾವಣಗೆರೆ ಮಹಾನಗರ ಪಾಲಿಕೆಯಿಂದ ಮಾರ್ಚ್ ಅಂತ್ಯದವರೆಗೆ ಎಲ್ಲಾ ವಾರ್ಡ್‍ಗಳಲ್ಲಿನ ಆಸ್ತಿಗಳಿಗೆ ಇ-ಆಸ್ತಿ ಸೇವೆ ದಾಖಲೆ ನೀಡುತ್ತಿದ್ದು ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.ಅವರು  ನಗರದ ನಿಟ್ಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಆಡಳಿತ, ಮಹಾನಗರ ಪಾಲಿಕೆಯಿಂದ ಆಸ್ತಿ ತೆರಿಗೆ ಪಾವತಿಸುವ ಮಾಲಿಕರಿಗೆ ಮನೆ ಬಾಗಿಲಿಗೆ ಇ-ಆಸ್ತಿ ಸೇವೆ ದಾಖಲೆ ಒದಗಿಸುವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ 2012 ರಲ್ಲಿ ದಾವಣಗೆರೆ ನಗರದಲ್ಲಿ 45 ಸಾವಿರ ಜನರಿಗೆ ಆಶ್ರಯ ಯೋಜನೆಯಡಿ ಅವರು ವಾಸಿಸುವ ಜಾಗಕ್ಕೆ ಹಕ್ಕುಪತ್ರ ನೀಡಲಾಗಿದೆ. ಆ ಸಂದರ್ಭದಲ್ಲಿ ಯಾವುದೇ ಮನೆ ಸಂಖ್ಯೆ ಇರಲಿಲ್ಲ. ಅವರೆಲ್ಲರೂ ಖಾತೆ ಮಾಡಿಸಿಕೊಂಡಿದ್ದು ಎಲ್ಲ ಹಕ್ಕುಗಳನ್ನು ಹೊಂದಲು ಇ-ಆಸ್ತಿ ದಾಖಲೆ ಬಹಳ ಪ್ರಮುಖವಾಗಿರುತ್ತದೆ. ಆ ಸಂದರ್ಭದಲ್ಲಿ ವಾಸಿಸುತ್ತಿದ್ದ ಮನೆ ಮಾಲಿಕರಿಗೆ ಹಕ್ಕುಪತ್ರ ವಿತರಣೆಗೆ ಇನ್ನೂ ಕೆಲವು ಬಾಕಿ ಉಳಿದಿದೆ ಎಂದರು.ಜನರು ಆಸ್ತಿ ತೆರಿಗೆ ಪಾವತಿಸಿ ಇ-ಆಸ್ತಿ ದಾಖಲೆ ಪಡೆಯಲು ಬಂದಾಗ ಈ ಹಿಂದೆ ಬಡಾವಣೆ ನಕ್ಷೆ, ಮನೆ ನಕ್ಷೆ, ಮನೆ ನಿರ್ಮಾಣ ಪರವಾನಗಿ ದಾಖಲೆಗಳನ್ನು ಕೇಳದೆ ಪ್ರಾಯೋಗಿಕವಾದ ದಾಖಲೆಗಳನ್ನಷ್ಟೆ ಪರಿಗಣಿಸಿ ಜನರಿಗೆ ಅಲೆದಾಡಿಸದೆ ಇ-ಆಸ್ತಿ ಖಾತೆ ಮಾಡಿಕೊಡಲು ಸೂಚನೆ ನೀಡಿದರು.ಜನರು ಆಸ್ತಿ ತೆರಿಗೆ ಕಟ್ಟಿ ಇ-ಆಸ್ತಿ ದಾಖಲೆ ಪಡೆಯುವುದರಿಂದ ಪರೋಕ್ಷವಾಗಿ ಪಾಲಿಕೆಗೆ ಆದಾಯವು ಬರಲಿದ್ದು ನೀರಿನ ಶುಲ್ಕ ವಸೂಲಿಯಾಗುತ್ತದೆ. ವಲಯವಾರು ಪ್ರಗತಿ ವರದಿಯನ್ನು ಪ್ರತಿ ವಾರ ನೀಡಬೇಕೆಂದ ಸಚಿವರು ಅನುಮೋದಿಸಿದ ದಾಖಲೆ ಎಷ್ಟು, ತಿರಸ್ಕರಿಸಿದ ಆಸ್ತಿ ಎಷ್ಟು, ಇದಕ್ಕೆ ಕಾರಣವೇನು ಎಂಬ ವರದಿಯನ್ನು ಪ್ರತಿ ವಾರ ನೀಡಲು ತಿಳಿಸಿದರು.ಪಾಲಿಕೆ ಹಣ ಅಭಿವೃದ್ದಿಗೆ ಬಳಸಿ; ರೂ.250 ಲಕ್ಷಗಳಲ್ಲಿ 29, 32, 35, 36 ನೇ ವಾರ್ಡ್‍ಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳನ್ನು ಈಗಾಗಲೇ ಸರ್ಕಾರದ ಅನುದಾನದಿಂದ ನಿರ್ಮಾಣ ಮಾಡಲಾಗಿದ್ದು ಪಾಲಿಕೆ ಅನುದಾನದಿಂದ ಮಾಡುವ ಪ್ರಮುಖ ರಸ್ತೆಗಳು ಬಾಕಿ ಉಳಿದಿಲ್ಲ. ಪಾಲಿಕೆಯ ಅನುದಾನದಲ್ಲಿ ವಾರ್ಡ್ ರಸ್ತೆ, ಗುಂಡಿಮುಚ್ಚುವ ಕಾಮಗಾರಿ, ಬ್ರಿಡ್ಜ್, ಚರಂಡಿ ಕಾಮಗಾರಿ ತೆಗೆದುಕೊಳ್ಳಲು ತಿಳಿಸಿ ಪಾಲಿಕೆಗೆ ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಅನುದಾನ ಸರ್ಕಾರದಿಂದ ಬರಲಿದೆ. ಈಗಾಗಲೇ ಜಲಸಿರಿ ಕಾಮಗಾರಿ, ಅಂಡರ್‍ಗ್ರೌಂಡ್ ವಿದ್ಯುತ್ ಕೇಬಲೀಕರಣ, ರೂ.25 ಕೋಟಿಯಲ್ಲಿ ವಿಸ್ತರಣೆಯಾದ ಬಡಾವಣೆಗಳಿಗೆ ಒಳಚರಂಡಿ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿವೆ ಎಂದರು.