ಹಿಂಜರಿಕೆ ಬೇಡ ಆತ್ಮವಿಶ್ವಾಸವಿರಲಿ

ವಿಜಯಪುರ.ಫೆ೧೯:ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹೆದರಿಕೆ, ಹಿಂಜರಿಕೆ ಇಟ್ಟುಕೊಳ್ಳದೆ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು, ಪರೀಕ್ಷೆಯನ್ನು ಲೀಲಾಜಾಲವಾಗಿ ಎದುರಿಸಬೇಕು ಎಂದು ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಾಲಿಗೆ ಮುನಿರಾಜುರವರು ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸರಕಾರಿ ಹೆಣ್ಣು ಮಕ್ಕಳ ಪಾಠಶಾಲೆ, ಮೌಲಾನಾ ಆಜಾದ್ ಸರಕಾರಿ ಉರ್ದು ಪ್ರೌಢಶಾಲೆ, ಮಹಾತ್ಮಾ ಪ್ರೌಢಶಾಲೆಗಳ ಎಸ್ ಎಸ್ ಎಲ್ ಸಿ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜೆ.ಸಿ.ಐ ಸಂಸ್ಥೆಯ ಅಂತರರಾಷ್ಟ್ರೀಯ ತರಬೇತುದಾರ ಶಿಕ್ಷಕರಾದ ತುಮಕೂರಿನ ಶ್ರೀಕಾಂತ್‌ರವರು ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳಬೇಕೆಂಬ ಆಶಯ ಮಾತ್ರ ಇದ್ದರೆ ಸಾಲದು. ಇರುವ ೩೮ ದಿನಗಳಲ್ಲಿ ಅದಕ್ಕೆ ಅವಶ್ಯಕವಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು, ಇರುವ ೩೮ ದಿನಗಳಲ್ಲಿ ನಮಗೆ ಇರುವ ೬ ಸಬ್ಜೆಕ್ಟ್ ಗಳಿಂದ ಪ್ರತಿ ಸಬ್ಜೆಕ್ಟ್ ಗೆ ಎಷ್ಟು ಸಮಯ ಮೀಸಲಿಡಬೇಕೆಂಬ ಸಮಯದ ವ್ಯವಸ್ಥೆ ಮಾಡಿಕೊಂಡು, ಹೇಗೋ ಪರೀಕ್ಷೆ ಆಗುತ್ತದೆ ಎಂಬ ಮನಸ್ಥಿತಿಯಿಂದ ಹೊರಬಂದು ಹೇಗೆ ಪರೀಕ್ಷೆ ಎದುರಿಸಬೇಕು ಎಂಬ ಮನಸ್ಥಿತಿಗೆ ಒಳಗಾಗಬೇಕು ಪರೀಕ್ಷೆಯನ್ನು ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದುವಂತಾಗಬೇಕು. ಸಲೀಸಾಗಿರುವ ಸುಲಭವಾಗಿರುವ ವಿಷಯಗಳನ್ನೇ ಪದೇಪದೇ ಓದುವುದನ್ನು ಬಿಟ್ಟು ಕಷ್ಟದಿಂದ ಕೂಡಿದ ವಿಷಯಗಳಿಗೂ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಗಳು ದೇಶದಾದ್ಯಂತ ನಡೆಯಲಿದ್ದು, ನಮ್ಮ ದೇಶಕ್ಕೆ ವಿಶ್ವಸಂಸ್ಥೆಯಿಂದ ನೀಡುವ ಅನುದಾನವು ಸಹ ಒಟ್ಟಾರೆ ದೇಶದ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವವರ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದರು.
ಇರುವ ಸಮಯವನ್ನು ಸದುಪಯೋಗಪಡಿಸಿಕೊಂಡು, ನಿರಂತರವಾಗಿ ಓದಿನಲ್ಲಿ ಮಗ್ನರಾಗದಿದ್ದರೆ ನಿಮ್ಮ ವೈಫಲ್ಯವು ನಿಮ್ಮ ಶಿಕ್ಷಕರ ಪ್ರತಿಭೆಯ ಮೇಲೂ ಪರಿಣಾಮ ಬೀರುತ್ತದೆ. ದೇವರು ಅತ್ಯುತ್ತಮವಾಗಿ ಅಂಕ ಪಡೆಯುವ ವಿದ್ಯಾರ್ಥಿಗೆ ಹಾಗೂ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೂ ದಿನಕ್ಕೆ ೨೪ ಗಂಟೆಗಳನ್ನು ಮಾತ್ರವೇ ನೀಡಿದ್ದು, ಅವರವರು ಸಮಯವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಫಲಿತಾಂಶ ಇರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಸಹಶಿಕ್ಷಕರುಗಳಾದ ನಾರಾಯಣ್, ಅರುಂಧತಿ ಸೇವಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅಮರನಾರಾಯಣಪ್ಪ, ಉಪಾಧ್ಯಕ್ಷರಾದ ಮುನಿಕೃಷ್ಣಪ್ಪ, ಕಾರ್ಯದರ್ಶಿ ಡಿಎನ್ ಅನಿಲ್, ಖಜಾಂಚಿ ಡಿ.ಎಂ.ವೇಣುಗೋಪಾಲ್, ನಿರ್ದೇಶಕರುಗಳಾದ ಎನ್ ನರಸಿಂಹಮೂರ್ತಿ, ಎನ್ ವೆಂಕಟಪ್ಪ, ಡಿ ಮುನಿಕೃಷ್ಣಪ್ಪ, ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಜು ಅವಳೇಕರ್, ಮಹಾತ್ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಶ್ವಥ್ ನಾರಾಯಣ್, ಮೌಲಾನ ಆಜಾದ್, ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಪ್ರಿಯದರ್ಶಿನಿ, ಅರುಂಧತಿ ಸೇವಾ ಸಂಸ್ಥೆಯ ಪದಾಧಿಕಾರಿಗಳಾದ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅರುಂಧತಿ ಸೇವಾ ಸಂಸ್ಥೆ ವತಿಯಿಂದ ನಗದು ಮೂಲಕ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.