ಹಿಂಜರಿಕೆ ಬಿಟ್ಟು ಲಸಿಕೆ ಪಡೆಯಿರಿ

ಚಿತ್ರದುರ್ಗ,ಸೆಪ್ಟೆಂಬರ್09:
ಕೋವಿಡ್ ಲಸಿಕೆಯು ಕೋವಿಡ್‍ನಿಂದ ಸಂಭವಿಸುವ ಸಾವು ನೋವುಗಳನ್ನು ನಿಯಂತ್ರಿಸುತ್ತದೆ. ಯಾವುದೇ ಅನುಮಾನ ಬೇಡ ನಿಮ್ಮ ಹಿಂಜರಿಕೆ ಬಿಟ್ಟು ಲಸಿಕೆ ಪಡೆಯಿರಿ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಯಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಜಾದ್ ನಗರದ ಸರ್ಕಾರಿ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕೋವಿಡ್ ಲಸಿಕಾ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಳಗೋಡು ಗ್ರಾಮದಲ್ಲಿ ಲಸಿಕಾ ಪ್ರಗತಿ ಕುಂಟಿತವಾಗಿದೆ. ಯಾವ ಕಾರಣಕ್ಕಾಗಿ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದೀರಾ, ನಿಮಗಿರುವ ಪ್ರಶ್ನೆ ಅನುಮಾನ ಬಗೆಹರಿಸಿಕೊಂಡು ಲಸಿಕೆ ಪಡೆಯಿರಿ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್ ಮಂಜುನಾಥ್ ಮಾತನಾಡಿ, ನಿಮ್ಮ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದ ಕುಗ್ರಾಮ. ಕೋವಿಡ್‍ನಿಂದ ನಿಮ್ಮ ರಕ್ಷಣೆಯಾಗಬೇಕು ವ್ಯಾಪಾರ ವಹಿವಾಟಿನ ಸಂಬಂಧಿಸಿದಂತೆ ನಗರಗಳಿಗೆ ಹೋಗಿ ಬಂದು ಮಾಡುತ್ತಿರುತ್ತೀರಾ, ಲಸಿಕೆ ಪಡೆಯದೆ ಇದ್ದಲ್ಲಿ ಸೋಂಕು ತಗುಲಿ ತೀವ್ರ ಸ್ವರೂಪ ಪಡೆದುಕೊಂಡಗಾ ನಿಮ್ಮನ್ನು ರಕ್ಷಿಸುವವರು ಯಾರು? ನಿಮ್ಮ ಕುಟುಂಬದ ಜವಾಬ್ದಾರಿ ನಿಮಗಿಲ್ಲವೇ ನಿಮಗಾಗಿ ನಿಮ್ಮ ಕುಟುಂಬದ ರಕ್ಷಣೆಗಾಗಿ ಇಂದೇ ಲಸಿಕೆ ಪಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಧಾರ್ಮಿಕ ಮುಖಂಡರು ಸಭೆ ನಡೆಸಿ ಮಸೀದಿಯಲ್ಲಿ ಪ್ರಚಾರ ಮಾಡಿದ ನಂತರ 250 ಜನರು ಲಸಿಕಾ ಸತ್ರದಲ್ಲಿ ಭಾಗವಹಿಸಿ ಲಸಿಕೆ ಪಡೆದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಇಮಾಮ್ ಸಾಬ್, ರಹಮತ್, ದಾದು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಲತಾ, ಮಾರುತಿಪ್ರಸಾದ್, ಶಾಲಾ ಶಿಕ್ಷಕಕರಾದ ಫಾತಿಮಾ, ಕವಿತಾ, ಸುರೇಶ್ ಉಪಸ್ಥಿತರಿದ್ದರು.Attachments area