ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ರೈತರಿಗೆ ಸೂಚನೆ

ಕಲಬುರಗಿ.ಡಿ.30:ಅವರಾದ (ಬಿ) ಹೋಬಳಿಯ ಶ್ರೀನಿವಾಸ ಸರಡಗಿ ಗ್ರಾಮದ ಬಸವರಾಜ ಚನ್ನಬಸಪ್ಪ, ಪ್ರವೀಣ ತಂಗಾ ಹಾಗೂ ಮಾರ್ತಂಡಪ್ಪ ಭೀಮಶಾ ಇವರ ಕ್ಷೇತ್ರಗಳಲ್ಲಿ ಇತ್ತೀಚೆಗೆ ಹಿಂಗಾರು ಬೆಳೆ ಸಮೀಕ್ಷೆ ಕೈಗೊಳ್ಳಲಾಯಿತು.

ಕಲಬುರಗಿ ಉಪ ವಿಭಾಗದ ಉಪ ಕೃಷಿ ನಿರ್ದೇಶಕಿ ಅನುಸುಯಾ ಹೂಗಾರ ಅವರು ಕಲಬುರಗಿ ಹಾಗೂ ಕಮಲಾಪುರ ತಾಲೂಕಿನ ಎಲ್ಲಾ ರೈತರು ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಜೋಳ, ಕಡಲೆ, ಕುಸುಮೆ, ಗೋಧಿ, ಸೂರ್ಯಕಾಂತಿ ಬೆಳೆಗಳ ಮಾಹಿತಿಯನ್ನು “ಹಿಂಗಾರು ರೈತರ ಬೆಳೆ ಸಮೀಕ್ಷೆ 2020-21” (Rabi Season Farmer App 2020-21) ಮೊಬೈಲ್ ಆಪ್‍ನಲ್ಲಿ ಅಪ್‍ಲೋಡ್ ಮಾಡಬೇಕೆಂದರು.

ಬೆಳೆ ಸಮೀಕ್ಷೆಯಲ್ಲಿ ಅಪಲೋಡ ಮಾಡಿದ ಬೆಳೆ ಸಮೀಕ್ಷೆಯ ದತ್ತಾಂಶವು ಬೆಳೆಹಾನಿ ಪರಿಹಾರ, ಬೆಳೆ ವಿಮೆ, ಬೆಳೆ ಕಟಾವು ಪ್ರಯೋಗ, ಗರಿಷ್ಠ ಬೆಂಬಲ ಬೆಲೆ ಖರೀದಿ, ಆರ್.ಟಿ.ಸಿ.(RTC) ಯಲ್ಲಿ ಬೆಳೆ ದಾಖಲು ಹೀಗೆ ವಿವಿಧ ಯೋಜನೆಗಳಿಗೆ ಉಪಯುಕ್ತವಾಗಲಿದೆ. ಎಲ್ಲಾ ರೈತರು ಕಡ್ಡಾಯವಾಗಿ ಬೆಳೆ ಸಮೀಕ್ಷೆಯಲ್ಲಿ ಭಾಗವಹಿಸಿ ಬೆಳೆಗಳ ದಾಖಲೀಕರಣ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಹಾಗೂ ಕೃಷಿ ಅಧಿಕಾರಿಗಳಾದ ಸಾಯಿಬಣ್ಣ ಲಿಂಗದಳ್ಳಿ, ನೀಲಕಂಠ, ಪ್ರಿಯಾಂಕಾ ಕುಲಕರ್ಣಿ, ಪುರುಷೊತ್ತಮ ಪಾಟೀಲ ಉಪಸ್ಥಿತರಿದ್ದರು.